ಪ್ರಧಾನಿಯಿಂದ ನೂತನ ಸಂಸತ್ ಭವನ ಉದ್ಘಾಟನೆ: ಉದ್ಘಾಟನೆಯ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು 75 ರೂ. ನಾಣ್ಯವನ್ನು ಬಿಡುಗಡೆ

ಪ್ರಧಾನಿಯಿಂದ ನೂತನ ಸಂಸತ್ ಭವನ ಉದ್ಘಾಟನೆ: ಉದ್ಘಾಟನೆಯ ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ಮತ್ತು 75 ರೂ. ನಾಣ್ಯವನ್ನು ಬಿಡುಗಡೆ 


ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ವಿಶೇಷ ಅಂಚೆ ಚೀಟಿ ಮತ್ತು 75 ರೂ. ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿದೆ.


50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗಿದೆ. ಅಲ್ಲದೆ ಇದು 35 ಗ್ರಾಂ. ತೂಕ ಹೊಂದಿದೆ.

ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆಯ ಚಿತ್ರವನ್ನು ಹೊಂದಿದೆ. ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ `ಭಾರತ್' ಮತ್ತು ಇಂಗ್ಲಿಷ್‍ನಲ್ಲಿ `ಇಂಡಿಯಾ' ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ.

ನಾಣ್ಯದ ಇನ್ನೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಇಸವಿಯ ಉಲ್ಲೇಖ ಮಾಡಲಾಗಿದೆ. ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ, ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ನೂತನ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ


ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಸಂಸತ್ ಭವನ ಉದ್ಘಾಟಿಸಬೇಕು ಎಂದು ಆಗ್ರಹಿಸಿ ನೂತನ ಸಂಸತ್ ಭವನ ಉದ್ಘಾಟನೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮರಣ ಫಲಕವನ್ನು ಅನಾವರಣಗೊಳಿಸುವ ಮೂಲಕ ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು.


ಬೆಳಗ್ಗೆ 7.30ಕ್ಕೆ ನೂತನ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ನಂತರ ಸಂಸತ್ ಸಭಾಧ್ಯಕ್ಷ ಓಂ ಬಿರ್ಲಾ ಅವರೊಂದಿಗೆ ಪೂಜೆಗೆ ಕುಳಿತರು.

ಈ ಕಾರ್ಯಕ್ರಮದಲ್ಲಿ ಅಧೀನಂ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಗೆ ಸೆಂಗೋಲ್ ಅನ್ನು ಹಸ್ತಾಂತರಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿಯವರು ಐತಿಹಾಸಿಕ ರಾಜದಂಡವನ್ನು ಲೋಕಸಭಾ ಸಭಾಂಗಣದೊಳಗೆ ಕೊಂಡೊಯ್ದು, ಅದನ್ನು ಲೋಕಸಭಾಧ್ಯಕ್ಷದ ಪೀಠದ ಬದಿಯಲ್ಲಿ ಪ್ರತಿಷ್ಠಾಪಿಸಿದರು.

ಇದಾದ ನಂತರ ಭವ್ಯ ನೂತನ ಸಂಸತ್ ಭವನ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಕಾರ್ಮಿಕರ ಗುಂಪನ್ನು ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು.

ಆ ಬಳಿಕ ಹಲವಾರು ಧಾರ್ಮಿಕ ಪ್ರತಿನಿಧಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು.



Previous Post Next Post