ಅಗ್ನಿ ಜ್ವಾಲೆ ಉಗುಳುತ್ತಾ ಚಂದ್ರನತ್ತ ಹೊರಟ ಚಂದ್ರಯಾನ-3; ಉಡಾವಣೆ ಯಶಸ್ವಿ

ಅಗ್ನಿ ಜ್ವಾಲೆ ಉಗುಳುತ್ತಾ ಚಂದ್ರನತ್ತ ಹೊರಟ ಚಂದ್ರಯಾನ-3; ಉಡಾವಣೆ ಯಶಸ್ವಿ 


ಶ್ರೀ ಹರಿಕೋಟಾ: 9.8.7.6.5.4.3…2.1..0 ಅಗ್ನಿ ಜ್ವಾಲೆಯನ್ನು ಉಗುಳುತ್ತಾ ಕೋಟಿ ಕೋಟಿ ಭಾರತೀಯರ ಕನಸಾದ ಚಂದ್ರಯಾನ -3 ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆ ನಭಕ್ಕೆ ಹಾರಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ -3 ಶಶಾಂಕ ದಕ್ಷಿಣ ಧ್ರುವದತ್ತ ಪ್ರಯಾಣ ಬೆಳೆಸಿದೆ.


ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್‌ ಮಾಡ್ಯೂಲ್‌, ಲ್ಯಾಂಡರ್‌, ರೋವರ್‌ ಹೊತ್ತೊಯ್ದಿದೆ. ಇದರ ಒಟ್ಟು ತೂಕ 3,926 ಕೆಜಿ. ಪ್ರೊಪಲ್ಷನ್‌ ಮಾಡ್ಯೂಲ್‌ ತೂಕವು 2,148 ಕೆಜಿ, ಲ್ಯಾಂಡರ್‌ (ರೋವರ್‌ ಸಹಿತ) 1,752 ಕೆಜಿ, ರೋವರ್‌ 26 ಕೆಜಿ ತೂಕವಿದೆ. ಪ್ರೊಪಲ್ಷನ್‌ ಮಾಡ್ಯೂಲ್‌ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ. ಲ್ಯಾಂಡರ್‌, ರೋವರ್‌ ಜೀವಿತಾವಧಿ 1 ಚಂದ್ರನ ದಿನ (14 ಭೂಮಿ ದಿನಗಳು) ಇರಲಿದೆ (ಚಂದ್ರನ ಹಗಲಿನಲ್ಲಿ ಚಾರ್ಜ್‌ ಆಗಲಿದೆ). ಈ ನೌಕೆ ಚಂದ್ರನಲ್ಲಿ ತಲುಪಲು 42 ದಿನಗಳನ್ನು ತೆಗೆದುಕೊಳ್ಳಲಿದೆ. ಅಂದರೆ ಆಗಸ್ಟ್ 23 ಅಥವಾ 24ರಂದು ಚಂದ್ರನಲ್ಲಿ ಇಳಿಯಲಿದೆ.


ಈವರೆಗೆ ಯಾವುದೇ ಉಪಕರಣಗಳು ಹೋಗದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆಯನ್ನು ಇಳಿಸುವ ಸಾಹಸಕ್ಕೆ ಮುಂದಾಗಿದೆ. ಚಂದ್ರನ ಅಧ್ಯಯನಕ್ಕೆ 2019ರ ಜು.22ರಂದು ಇಸ್ರೋ ಕೈಗೊಂಡಿದ್ದ ಚಂದ್ರಯಾನ-2 ಯೋಜನೆ ವಿಫಲವಾದ ಕಾರಣ ಮತ್ತೊಂದು ಚಂದ್ರಯಾನ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. ಈ ಬಾರಿ ನೌಕೆ ಇಳಿಸಲು 4 ಕಿ.ಮೀ. X 2.5 ಕಿ.ಮೀ.ನ ವಿಶಾಲ ಸ್ಥಳವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಉಷ್ಣಾಂಶ -230 ಡಿ.ಸೆ. ಗಿಂತ ಕಡಿಮೆ ಇದ್ದು, ಇಲ್ಲಿ ಬಹುಕಾಲದವರಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆಗಳು ಇರುವ ಅಂದಾಜಿದೆ. ಅಲ್ಲದೆ, 2008ರಲ್ಲಿ ಕೈಗೊಂಡ ಚಂದ್ರಯಾನ-1 ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ದಕ್ಷಿಣ ಧ್ರುವದಲ್ಲಿ ಈ ವರೆಗೂ ಬೆಳಕನ್ನೇ ಕಾಣದ ಹಲವು ಪ್ರದೇಶಗಳಿರುವ ಕಾರಣ ಇದು ವಿಜ್ಞಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Previous Post Next Post