ಚಂದ್ರಯಾನ 3 ಚಂದ್ರನಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆ: ನಾಳೆ ಸಂಜೆ 6ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರ ನಲ್ಲಿ ಇಳಿಸಲು ಇಸ್ರೋ ಪ್ರಯತ್ನ
ನವದೆಹಲಿ: ಭಾರತದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ 3 ಬಹುನಿರೀಕ್ಷಿತ ಹಂತಕ್ಕೆ ತಲುಪಿದೆ. ನಾಳೆ ಸಂಜೆ 6 ಗಂಟೆಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ. ಕಳೆದ ಚಂದ್ರಯಾನ 2ರಲ್ಲಿ ಇದೇ ಹಂತದಲ್ಲಿ ಇಸ್ರೋ ವಿಫಲಗೊಂಡಿತ್ತು. ಇಸ್ರೋಗೆ ಸಾಫ್ಟ್ ಲ್ಯಾಂಡಿಂಗ್ ಒಂದು ಸವಾಲಾಗಿದ್ದು, ಕೊನೆಯ 20 ನಿಮಿಷ ಬಹಳ ನಿರ್ಣಾಯಕವಾಗಿದೆ.
ಸದ್ಯ ಭಾರತ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡುವ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದೆ. ವಿಕ್ರಮ್ ಲ್ಯಾಂಡರ್ನ ಒಳಗಿರುವ ಪ್ರಗ್ಯಾನ್ ರೋವರ್ ಚಂದ್ರನ ಅಂಗಳಕ್ಕೆ ಇಳಿದು ತನ್ನ ಚಮತ್ಕಾರ ಪ್ರದರ್ಶಿಸಲು ಸಜ್ಜಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಡೀ ಭಾರತವೇ ಎದುರು ನೋಡುತ್ತಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಚಂದ್ರಯಾನ ನೌಕೆ ಲ್ಯಾಂಡ್ ಆದರೆ, ಭಾರತದ ಪಾಲಿಗೆ ಸುವರ್ಣ ಯುಗವಾಗಲಿದೆ. ಏಕೆಂದರೆ ಈವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿಲ್ಲ. ಇಲ್ಲಿ ಲ್ಯಾಂಡ್ ಆಗುವುದು ತುಂಬಾ ಕಷ್ಟವೆಂದು ಹೇಳಲಾಗಿದೆ. ಇನ್ನು ಅಮೆರಿಕ, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಈಗಾಗಲೇ ಚಂದ್ರನ ಅಂಗಳಕ್ಕೆ ಇಳಿದಿವೆ. ಆದರೆ, ದಕ್ಷಿಣ ಧ್ರುವದಲ್ಲಲ್ಲ. ಆದರೆ, ಭಾರತದ ಯಶಸ್ವಿಯಾದರೆ, ಈ ರಾಷ್ಟ್ರಗಳ ಸಾಲಿಗೆ ಸೇರುವುದಲ್ಲದೆ, ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಸಾಧಿಸಲಿದೆ.
ಆದರೆ, ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಪ್ರಕ್ರಿಯೆಯಲ್ಲಿ ಕೊನೆಯ 20 ನಿಮಿಷ ತುಂಬಾ ನಿರ್ಣಾಯಕವಾಗಿದೆ.