ಐತಿಹಾಸಿಕ ನಿಮಿಷಕ್ಕೆ ಕ್ಷಣಗಣನೆ: 'ಚಂದ್ರಯಾನ-3' ಯಶಸ್ವಿ ಲ್ಯಾಂಡಿಂಗ್ ಗಾಗಿ ಕೋಟಿ ಭಾರತೀಯರ ಪ್ರಾರ್ಥನೆ
ಬೆಂಗಳೂರು, ಆ.23- ಭಾರತದ ಐತಿಹಾಸಿಕ ಕ್ಷಣ ಚಂದ್ರಯಾನ-3 ಯಶಸ್ಸಿಗೆ ಇನ್ನೊಂದು ಮೆಟ್ಟಿಲಷ್ಟೇ ಬಾಕಿಯಿದ್ದು, ನೂರಾ ನಲವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-3 ನೌಕೆ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿರುವ ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇಸ್ರೋದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಂದು ಸಂಜೆ ಲ್ಯಾಂಡ್ ಆಗಲಿದೆ. ಇದಕ್ಕಾಗಿ ಇಡೀ ವಿಶ್ವವೇ ಅದರ ಮೇಲೆ ದೃಷ್ಟಿ ನೆಟ್ಟಿದೆ. ಈ ಅದ್ಭುತವನ್ನು ಸಾಸುವ ಮೂಲಕ ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ ಇತರ ರಾಷ್ಟ್ರಗಳಲ್ಲಿ ಭಾರತವೂ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಿದ್ಧವಾಗಿದೆ. ಏಕೆಂದರೆ ಇದು ಚಂದ್ರನ ದಕ್ಷಿಣ ಧೃವವನ್ನು ತಲುಪಲಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಳ್ಳಲಿದೆ.
ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋರ್ವರ್‍ಪ್ರಗ್ಯಾನ್ ಒಳಗೊಂಡಿರುವ ಚಂದ್ರನ ಭೂಪ್ರದೇಶದಲ್ಲಿ ಅತ್ಯಂತ ಸುರಕ್ಷಿತವಾಗಿ ಹಾಗೂ ಹಗುರವಾಗಿ ಚಂದ್ರನ ನೆಲವನ್ನು ಸ್ಪರ್ಶಿಸುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ.
ವಿಕ್ರಂ ಸುರಕ್ಷಿತವಾಗಿ ಚಂದಪ್ಪನ ಅಂಗಳವನ್ನ ತಲುಪಿದರೆ ವಿಶ್ವದಲ್ಲಿ ವಿಕ್ರಮ ಸ್ಥಾಪಿಸಿದ ಗರಿಮೆ ಇಸ್ರೋ ಪಾಲಿಗೆ ಒದಗಿ ಬರಲಿದೆ. ಚಂದ್ರಯಾನ-3 ರ ಲ್ಯಾಂಡಿಂಗ್ ಭಾರತಕ್ಕೆ ಐತಿಹಾಸಿಕ ಮೈಲಿಗಲ್ಲಾಗಲಿದೆ. ಏಕೆಂದರೆ ಇದು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‍ನ ಸಂಕೀರ್ಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ರಾಷ್ಟ್ರವಾಗಿ ಗುರುತಿಸಿಕೊಳ್ಳಲಿದೆ. ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳ ಸಾಧನೆಯ ಶ್ರೇಣಿಗೆ ಸೇರಲಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಪರಿಶೋಧನೆಯಲ್ಲಿ ವಿಕ್ರಮ ಸಾಧಿಸಿದ ಶ್ರೇಷ್ಠತೆಗೆ ಒಳಗಾಗಲಿದೆ.
ಚಂದ್ರಯಾನ-3 ಕೊನೆಯ 17 ನಿಮಿಷಗಳು ಅತ್ಯಂತ ಸವಾಲಿನ ಸಮಯವಾಗಿದೆ. ಒಂದು ವೇಳೆ ಸಣ್ಣಪುಟ್ಟ ಸಮಸ್ಯೆಗಳು ಉಂಟಾದರೂ ಸುರಕ್ಷಿತವಾಗಿ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಇಸ್ರೊ ಈ ಬಾರಿ ಪೂರ್ವಸಿದ್ಧತೆ ನಡೆಸಿದೆ.ಅದಕ್ಕೂ ಮೊದಲು ವಿಕ್ರಮ್ ಲ್ಯಾಂಡರ್‍ಗೆ ಅನುಕೂಲಕರ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.