ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಸೆಪ್ಟೆಂಬರ್ 10 ಬೆಂಗಳೂರಿನಲ್ಲಿ

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಸೆಪ್ಟೆಂಬರ್ 10 ಬೆಂಗಳೂರಿನಲ್ಲಿ


ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಐವತ್ತನೇ ವರ್ಷಾಚರಣೆ ಪ್ರಯುಕ್ತ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ವತಿಯಿಂದ we The people of India ಎಂಬ ಸಂವಿಧಾನದ ಪೀಠಿಕೆಯ ಮೊದಲ ವಾಕ್ಯವನ್ನು ಎತ್ತಿ ಹಿಡಿದು ಕಾಶ್ಮೀರದಿಂದ ಆರಂಭಗೊಂಡು ದೇಶದ ಎಲ್ಲಾ ರಾಜ್ಯಗಳಲ್ಲಿ ಹಾದು ಬಂದ ಸಂವಿಧಾನ ಯಾತ್ರೆಯ ಸಮಾರೋಪ ಸಮಾರಂಭ ಇದೇ ಬರುವ ಸೆಪ್ಟೆಂಬರ್ 10 ರವಿವಾರ ಬೆಂಗಳೂರು ಮಹಾನಗರದ ಶ್ರೀ ಕೃಷ್ಣ ವಿಹಾರ್‌ ಅರಮನೆ ಮೈದಾನದಲ್ಲಿ  ನಡೆಯಲಿದೆ.


1973 ಎಪ್ರಿಲ್ 29ರಂದು ಕೇರಳದಲ್ಲಿ ‌ಸ್ಥಾಪಿತವಾದ ಸಂಘಟನೆ ಇಂದು ದೇಶದ ಮೂವತ್ತು ರಾಜ್ಯಗಳಲ್ಲಿ ಯುನಿಟ್, ಸೆಕ್ಟರ್, ಡಿವಿಷನ್, ಜಿಲ್ಲೆ ಹಾಗೂ ರಾಜ್ಯ ಸಮಿತಿ ಗಳನ್ನೊಳಗೊಂಡ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿರುವ ಮುಸ್ಲಿಂ ಸಮಾಜದ ಶ್ರೇಷ್ಠ ವಿದ್ಯಾರ್ಥಿ ಸಂಘಟನೆಯಾಗಿದೆ. ಕಳೆದ ಐವತ್ತು ವರ್ಷಗಳಿಂದ ದೇಶದ ವಿದ್ಯಾರ್ಥಿಗಳ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ನಮ್ಮ ರಾಜ್ಯದಲ್ಲಿ ಕಳೆದ ಮೂರುವರೆ ದಶಕಗಳಿಂದ ಕಾರ್ಯಾಚರಿಸುತ್ತಿರುವ SSF ವರದಕ್ಷಿಣೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ದ ಯಶಸ್ವಿ ಹಾಗೂ ಪರಿಣಾಮಕಾರಿ ಜಾಗೃತಿ, ಸಮಾಜದ ಹದಿಹರಿಯದ ಯುವಕರನ್ನು ಡ್ರಗ್ಸ್‌ಗಳಿಗೆ ಬಲಿಯಾಗದಂತೆ ಕಾಳಜಿ ವಹಿಸುವ, ನಾಡಿನ ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ, ದೇಶದ ಸರ್ವ ಧರ್ಮ ಭಾಂಧವರ ಮಧ್ಯೆ ಸಹಬಾಳ್ವೆಯನ್ನು ರೂಪಿಸುವ ಹಾಗು ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವಿಗೆ ನಿಯತ ಕಾಲಿಕ ಪತ್ರಿಕೆ ಹಾಗು ಪುಸ್ತಕ ಗಳನ್ನು ಮತ್ತು ಕನ್ನಡ ವಾಗ್ಮಿಗಳನ್ನು ಸಮಾಜಕ್ಕೆ ಸಮರ್ಪಿಸುವ ಕೆಲಸ ವನ್ನು ಸಂಘಟನೆ ಮಾಡಿದೆ. 


ಬೆಂಗಳೂರಿನಲ್ಲಿ ನಡೆಯಲಿರುವ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಉದ್ಘಾಟನೆ ಮಾಡಲಿದ್ದು ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. 


ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್,ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಅಲ್ ಬುಖಾರಿ ಕೂರತ್, ಸನ್ಮಾನ್ಯ ವಿಧಾನಸಭಾ ಸಭಾಧ್ಯಕ್ಷರಾದ ಯುಟಿ ಖಾದರ್ ಫರೀದ್, ಗೃಹ ಮಂತ್ರಿಗಳಾದ ಜಿ ಪರಮೇಶ್ವರ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಬಿ ಝಡ್ ಝಮೀರ್ ಅಹ್ಮದ್ ಖಾನ್, ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ, ತಮಿಳುನಾಡು ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಗಿಂಗಿ ಮಸ್ತಾನ್,  ಸಂಸದ ಟಿ.ಎನ್ ಪ್ರತಾಪನ್ ತೃಶೂರ್ ಕೇರಳ ಹಾಗೂ ಇನ್ನಿತರ ಧಾರ್ಮಿಕ ರಾಜಕೀಯ ಸಾಮಾಜಿಕ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ. 


ಅಂದು ಬೆಳಿಗ್ಗೆ 10ಗಂಟೆಗೆ ಶೃಂಗಾರ್ ಪ್ಯಾಲೇಸ್ ಸಭಾಂಗಣದಲ್ಲಿ ಪ್ರತಿನಿಧಿ ಸಮಾವೇಶ ನಡೆಯಲಿದ್ದು ರಾಜ್ಯದ ವಿವಿಧೆಡೆಗಳಿಂದ ಸುಮಾರು ಏಳು ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಹಾಫಿಝ್ ಸುಫಿಯಾನ್ ಸಖಾಫಿ ಪ್ರಟನೆಯಲ್ಲಿ ತಿಳಿಸಿದ್ದಾರೆ.

Previous Post Next Post