ನಾಲ್ಕನೇ ಹಂತದಲ್ಲಿ ಆಂಧ್ರ ಪ್ರದೇಶದ ಎಲ್ಲ 25, ತೆಲಂಗಾಣದ ಎಲ್ಲ 17 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರ ಜತೆಗೆ ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಿಗೂ ವೋಟಿಂಗ್ ನಡೆಯಲಿದೆ. ಆಡಳಿತಾರೂಢ ವೈ.ಎಸ್.ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಎಲ್ಲ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಎನ್‌ಡಿಎ ಭಾಗವಾಗಿ ಸೀಟು ಹಂಚಿಕೆಯೊಂದಿಗೆ ಸ್ಪರ್ಧಿಸಿವೆ.
ಒಡಿಶಾ ವಿಧಾನಸಭೆ 1ನೇ ಹಂತದ ಚುನಾವಣೆ: ಒಡಿಶಾದ 147 ವಿಧಾನಸಭೆ ಕ್ಷೇತ್ರಗಳ ಪೈಕಿ ಮೇ 13ರಂದು 28 ವಿಧಾನಸಭೆ ಕ್ಷೇತ್ರ ಹಾಗೂ 4 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಡಿಶಾದಲ್ಲಿ ಬಿಜು ಜನತಾದಳ ಸದ್ಯ ಅಧಿಕಾರದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಒಡಿಶಾವನ್ನು ತೆಕ್ಕೆಗೆ ಪಡೆಯಲು ಹವಣಿಸುತ್ತಿವೆ.
4ನೇ ಹಂತ ಪ್ರಮುಖ: ಈಗಾಗಲೇ ಮೂರು(ಎ.19, ಎ.26 ಮತ್ತು ಮೇ 7) ಹಂತದಲ್ಲಿ 283 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಹಾಗಾಗಿ 4ನೇ ಹಂತದ 96 ಕ್ಷೇತ್ರಗಳ ಲೋಕಸಭೆ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ. ಬಿಜೆಪಿ, ಕಾಂಗ್ರೆಸ್, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಬಿಜು ಜನತಾದಳ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿವೆ. ಬಹಿರಂಗ ಪ್ರಚಾರ ಅಂತ್ಯವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಇನ್ನು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.
ಎಲ್ಲೆಲ್ಲಿ ಚುನಾವಣೆ?: ಆಂಧ್ರ ಪ್ರದೇಶ(25), ತೆಲಂಗಾಣ(17), ಉತ್ತರ ಪ್ರದೇಶ(13), ಮಹಾರಾಷ್ಟ್ರ(11), ಮಧ್ಯ ಪ್ರದೇಶ(8), ಪಶ್ಚಿಮ ಬಂಗಾಲ(8), ಬಿಹಾರ(5), ಝಾರ್ಖಂಡ್(5), ಒಡಿಶಾ(4), ಜಮ್ಮು ಮತ್ತು ಕಾಶ್ಮೀರ(1)ದಲ್ಲಿ ಚುನಾವಣೆ ನಡೆಯಲಿದೆ.