ದೆಹಲಿಯಲ್ಲಿ ಗರಿಗೆದರಿದ ರಾಜಕೀಯ ಕಸರತ್ತು: ಇಂದು ಸಂಜೆ ಎನ್ ಡಿಎ ಮತ್ತು ಇಂಡಿಯಾ ಮೈತ್ರಿ ಕೂಟಗಳ ಸಭೆ
ನವದೆಹಲಿ : ದೆಹಲಿಯಲ್ಲಿ ರಾಜಕೀಯ ಕಸರತ್ತು ಗರಿಗೆದರಿದ್ದು, ಇಂದು ಸಂಜೆ 4:30 ಕ್ಕೆ ಎನ್ ಡಿ ಎ ಮೈತ್ರಿಕೂಟಗಳ ಸಭೆ ನಿಗದಿಯಾಗಿದೆ.
ಲೋಕಸಭಾ ಚುನಾವಣೆ 2024 ರ ಫಲಿತಾಂಶದ ಒಂದು ದಿನದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಇಂದು ಸಂಜೆ ದೆಹಲಿಯಲ್ಲಿ ಸಭೆ ಸೇರಲಿದೆ.
ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಸ್ಪೀಕರ್, ಸಚಿವ ಸ್ಥಾನ ನೀಡುವಂತೆ ಮೈತ್ರಿಕೂಟಗಳು ಪಟ್ಟು ಹಿಡಿಯುವ ಸಾಧ್ಯತೆಯಿದೆ.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿ ಎರಡೂ ಬಿಹಾರದಲ್ಲಿ 12 ಸ್ಥಾನಗಳನ್ನು ಗೆದ್ದಿವೆ. ಇದಲ್ಲದೆ, ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ತಮ್ಮ ಪಕ್ಷವು ಈ ಸಭೆಯಲ್ಲಿ ಭಾಗವಹಿಸಲಿದೆ ಎಂದು ಹೇಳಿದರು. ತಮ್ಮ ಪಕ್ಷವು ಎನ್ಡಿಎಯನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಹೇಳಿದ ಪಾಸ್ವಾನ್, ಪ್ರಧಾನಿ ಮೋದಿಯವರ ಅಡಿಯಲ್ಲಿ ಮೂರನೇ ಅವಧಿಯು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎಂದು ಹೇಳಿದರು.
ವಿಪಕ್ಷ ನಾಯಕನ ಜೊತೆ ಕಾಣಿಸಿಕೊಂಡ ನಿತೀಷ್
ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದ್ದು, ಆದರೆ ಇದರ ನಡುವಲ್ಲೇ ಕೇಂದ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ದೆಹಲಿಗೆ ತೆರಳುವ ವಿಮಾನದಲ್ಲಿ ವಿಪಕ್ಷಗಳ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಮೂಲಗಳ ಪ್ರಕಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬುಧವಾರ (ಜೂನ್ 05) ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಸಿಎಂ ನಿತೀಶ್ ಕುಮಾರ್ ದೆಹಲಿಗೆ ತೆರಳಲಿರುವ ವಿಮಾನದಲ್ಲಿ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ಇದ್ದಾರೆ. ವಿಮಾನವು ಬೆಳಿಗ್ಗೆ 10:45 ಕ್ಕೆ ಬಿಹಾರದಿಂದ ದೆಹಲಿಗೆ ಹೊರಟಿದ್ದು, ಇದರಲ್ಲಿ ಎನ್‌ಡಿಎ ಮೈತ್ರಿ ಕೂಟದ ನಾಯಕ ನಿತೀಶ್ ಕುಮಾರ್ ಅವರು ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ಕಾಣಿಸಿಕೊಂಡಿರುವುದು ಬಿಜೆಪಿಗೆ ಆತಂಕ ಸೃಷ್ಟಿಸಿದೆ.
ನಿತೀಶ್ ಕುಮಾರ್ ಮತ್ತು ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಇಬ್ಬರೂ ನಾಯಕರು ಫ್ಲೈಟ್‌ನಲ್ಲಿ ಹೋಗಿರುವುದರಿಂದ ರಾಜಕೀಯ ಜಟಾಪಟಿ ತೀವ್ರಗೊಂಡಿದೆ. ವಾಸ್ತವವಾಗಿ, ಲೋಕಸಭೆ ಚುನಾವಣೆಯ ಫಲಿತಾಂಶಗಳು ಹೊರಬಿದ್ದ ನಂತರ, ಸರ್ಕಾರ ರಚಿಸುವ ಮೊದಲು ಇಂದು ದೆಹಲಿಯಲ್ಲಿ ಎನ್‌ಡಿಎ ಸಭೆ ನಡೆಯಲಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಸಜ್ಜಾಗಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳಲು ಎನ್‌ಡಿಎಗೆ ಸಂಬಂಧಿಸಿದ ಎಲ್ಲ ಪಕ್ಷಗಳ ನಾಯಕರನ್ನು ಇಂದು ದೆಹಲಿಗೆ ಕರೆಸಲಾಗಿದೆ.