ಚೊಚ್ಚಲ ವಿಶ್ವ ಕಪ್ ಟೆಸ್ಟ್ ಕ್ರಿಕೆಟ್: ವಿಶ್ವ ಕಿರೀಟಕ್ಕೆ ಮುತ್ತಿಟ್ಟ ನ್ಯೂಝಿಲೆಂಡ್, ಭಾರತಕ್ಕೆ 8 ವಿಕೆಟ್ ಗಳ ಸೋಲು
ಸೌತಾಂಪ್ಟನ್, ಜೂ.23: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಝಿಲ್ಯಾಂಡ್ ತಂಡವು 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿತು.
ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೇವಲ 170 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಝಿಲ್ಯಾಂಡ್ ಗೆ 139 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ 2 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿ ಗೆಲುವು ದಾಖಲಿಸಿತು. ನ್ಯೂಝಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 52, ರಾಸ್ ಟೇಲರ್ 47 ರನ್ ಬಾರಿಸಿದರು. ಭಾರತದ ಪರ ಆರ್.ಅಶ್ವಿನ್ 2 ವಿಕೆಟ್ ಪಡೆದರು.
ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 217 ರನ್ ಬಾರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಝಿಲ್ಯಾಂಡ್ 249 ರನ್ ಗಳಿಗೆ ಆಲೌಟ್ ಆಗಿ, 32 ರನ್ ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 170 ರನ್ ಗಳಿಗೆ ಆಲೌಟ್ ಆಗಿ ನ್ಯೂಝಿಲ್ಯಾಂಡ್ ಗೆ 139 ರನ್ ಗಳ ಗುರಿ ನೀಡಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ-217 ಮತ್ತು 170. ನ್ಯೂಜಿಲ್ಯಾಂಡ್-249 ಮತ್ತು 2 ವಿಕೆಟಿಗೆ 140