ಚೊಚ್ಚಲ ಟೆಸ್ಟ್ ವಿಶ್ವಕಪ್: ಫೈನಲ್ ನಾಳೆ, ಭಾರತ ನ್ಯೂಝಿಲಾಂಡ್ ಪ್ರಶಸ್ತಿಗಾಗಿ ಫೈಟ್, ಭಾರತದ ಫೈನಲ್ ಪಯನ ಹೀಗೆ...
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್.. ಐಸಿಸಿಯು ಇಂತಹದ್ದೊಂದು ಯೋಜನೆಯನ್ನು ಮುಂದಿಟ್ಟಾಗ ಬಹುತೇಕರು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಏಕದಿನ, ಟಿ20 ಮಾದರಿಯಂತೆ ಟೆಸ್ಟ್ ವಿಶ್ವಕಪ್ ಅಥವಾ ಚಾಂಪಿಯನ್ ಶಿಪ್ ನಡೆಸುವುದು ಹೇಗೆ ಸಾಧ್ಯ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿತ್ತು. ಇದು ವಿಫಲವಾಗುತ್ತದೆ ಎಂಬ ಅಭಿಪ್ರಾಯಗಳೂ ಕೇಳಿ ಬಂದಿತ್ತು. ಆದರೆ ಐಸಿಸಿಯು ಕೂಟ ಹೇಗಿರಬೇಕು ಎಂದು ಸೂಕ್ತ ರೂಪುರೇಷೆಯೊಂದಿಗೆ ತಯಾರಾಗಿ ಬಂದಿತ್ತು. ಅದರಂತೆ 2019ರ ಜುಲೈನಲ್ಲಿ ಈ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿತ್ತು.
ಇದು ಏಕದಿನ, ಟಿ20 ವಿಶ್ವಕಪ್ ನಂತೆ ಒಂದು ಅಥವಾ ಎರಡು ತಿಂಗಳಲ್ಲಿ ನಡೆಯುವ ಕೂಟವಲ್ಲ. ಅಥವಾ ಒಂದೇ ದೇಶದಲ್ಲಿ ನಡೆಯವ ಪಂದ್ಯಾವಳಿಯಲ್ಲ. ಇದರ ಅವಧಿ ಎರಡು ವರ್ಷ. ದೇಶಗಳು ದ್ವಿಪಕ್ಷೀಯವಾಗಿ ಆಡುವ ಟೆಸ್ಟ್ ಸರಣಿಗಳಿಗೆ ಅಂಕ ನೀಡುತ್ತಾ ಎರಡು ವರ್ಷಗಳ ಬಳಿಕ ಹೆಚ್ಚು ಅಂಕ ಪಡೆದ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಸುವುದು.
ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?
ಈ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಹೆಚ್ಚು ಸ್ಥಿರ ಪ್ರದರ್ಶನ ನೀಡಿದ ಮತ್ತು ಯಶಸ್ವಿ ತಂಡವೆಂದರೆ ಅದು ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ. 2019 ಆಗಸ್ಟ್ ನಿಂದ ಭಾರತ ಒಟ್ಟು 17 ಪಂದ್ಯಗಳನ್ನಾಡಿದ್ದು, ಅದರಲ್ಲಿ12 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಮಾತ್ರ ಡ್ರಾನಲ್ಲಿ ಅಂತ್ಯವಾಗಿದೆ. ಈ ಸಮಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್, ಆಸೀಸ್ ವಿರುದ್ಧ ಸರಣಿ ಗೆಲುವು ಕಂಡಿದೆ. ಸರಣಿ ಸೋಲು ಅನುಭವವಾಗಿದ್ದು ನ್ಯೂಜಿಲ್ಯಾಂಡ್ ವಿರುದ್ಧ ಮಾತ್ರ.
ಭಾರತ ಮೊದಲ ಸರಣಿ ಆಡಿದ್ದು ವೆಸ್ಟ್ ಇಂಡೀಸ್ ವಿರುದ್ಧ. ಕೆರಿಬಿಯನ್ ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ ಎರಡೂ ಪಂದ್ಯವನ್ನು ಸುಲಭವಾಗಿ ಗೆದ್ದಿತ್ತು. ತ್ರಿವಳಿ ವೇಗಿಗಳಾದ ಬುಮ್ರಾ, ಇಶಾಂತ್ ಮತ್ತು ಶಮಿ ಘಾತಕ ಸ್ಪೆಲ್ ಮಾಡಿದ್ದರು. ಇದೇ ಸರಣಿಯಲ್ಲಿ ಹನುಮ ವಿಹಾರಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು.
ಟೆಸ್ಟ್ ಚಾಂಪಿಯನ್ ಶಿಪ್ ನ ಮೂರನೇ ಸರಣಿ ನಡೆದಿದ್ದು ಬಾಂಗ್ಲಾ ವಿರುದ್ಧ. ಭಾರತದಲ್ಲಿ ನಡೆದ ಎರಡು ಪಂದ್ಯಗಳ ಸರಣಿಯನ್ನು ವೈಟ್ ವಾಶ್ ಮಾಡಿ ಗೆದ್ದು, ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಅಜೇಯ ದಾಖಲೆ ಮುಂದುವರಿಸಿತು. ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಗಳಿಸಿದರು. ಎರಡನೇ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ದಾಳಿಗೆ ಬಾಂಗ್ಲಾ ಹುಲಿಗಳು ತಬ್ಬಿಬ್ಬಾಗಿದ್ದರು.
ಮೊದಲ ಸೋಲು: ಚಾಂಪಿಯನ್ ಶಿಪ್ ನಲ್ಲಿ ಅಜೇಯ ಸಾಧನೆಯಿಂದ ಮೆರೆಯುತ್ತಿದ್ದ ಭಾರತ ತಂಡಕ್ಕೆ ಶಾಕ್ ನೀಡಿದ್ದು ಕಿವೀಸ್. ಅವರ ನೆಲದಲ್ಲಿ ನಡೆದ ಸರಣಿಯ ಎರಡೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಕಿವೀಸ್ ವೇಗಿಗಳ ದಾಳಿಗೆ ನಲುಗಿದ ಭಾರತ ತಂಡ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ( ಏಕೈಕ) ಸರಣಿ ಸೋಲನುಭವಿಸಿತು.
ಆಸೀಸ್ ವಿಕ್ರಮ: 2020ರ ವರ್ಷಾಂತ್ಯದಲ್ಲಿ ಆಸೀಸ್ ನಲ್ಲಿ ನಡೆದ ಬಾರ್ಡರ್- ಗಾವಸ್ಕರ್ ಟ್ರೋಫಿಯಲ್ಲಿ ಭಾರತ ತಂಡ ಅಭೂತಪೂರ್ವ ಸಾಧನೆ ಮಾಡಿತು. ಮೊದಲ ಪಂದ್ಯದಲ್ಲಿ ಅವಮಾನಕರ ಸೋಲಾದರೂ ನಂತರದ ಪಂದ್ಯಗಳಲ್ಲಿ ಉತ್ತಮ ಕಮ್ ಬ್ಯಾಕ್ ಮಾಡಿತು. ವಿರಾಟ್ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಯುವ ಪಡೆಯು ಆಸೀಸ್ ಗೆ ಅವರದ್ದೇ ನೆಲದಲ್ಲಿ ಮಣ್ಣು ಮುಕ್ಕಿಸಿತು. ರಹಾನೆ, ಪೂಜಾರ ಸೇರಿದಂತೆ ಹಿರಿಯರ ಜೊತೆ ಪಂತ್, ಸುಂದರ್, ಗಿಲ್ ಸೇರಿದಂತೆ ಕಿರಿಯರು ತೋರಿದ ಅಸಾಮಾನ್ಯ ಪರಾಕ್ರಮದಿಂದ ತಂಡ 2-1 ಅಂತರದಿಂದ ಸರಣಿ ಗೆದ್ದಿತು.
ಇಂಗ್ಲೆಂಡ್ ಸರಣಿ: ಇದು ಈ ಕೂಟದ ಅಂತಿಮ ಸರಣಿ. ಒಂದೆಡೆ ದಕ್ಷಿಣ ಆಫ್ರಿಕಾ- ಆಸೀಸ್ ಸರಣಿ ರದ್ದಾದ ಕಾರಣ ನ್ಯೂಜಿಲ್ಯಾಂಡ್ ಫೈನಲ್ ಗೇರಿತ್ತು. ಭಾರತ ಫೈನಲ್ ತಲುಪಬೇಕಾದರೆ ಭಾರತ ಸರಣಿ ಗೆಲ್ಲಬೇಕಿತ್ತು. ಅತ್ತ ಇಂಗ್ಲೆಂಡ್ ಗೂ ಅವಕಾಶವಿತ್ತು. ಇಂತಹ ಸಂದರ್ಭದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಅಧಿಕಾರಯುತವಾಗಿ ಗೆದ್ದಿತು. ಆದರೆ ಮುಂದೆ ನಡೆದಿದ್ದು ಭಾರತದ ಆಟ. ಬ್ಯಾಟ್ಸಮನ್ ಗಳ ಪರಾಕ್ರಮ ಮತ್ತು ಸ್ಪಿನ್ನರ್ ಗಳ ಕೈಚಳಕದ ಎದುರು ಇಂಗ್ಲೆಂಡ್ ಆಟ ನಡೆಯಲಿಲ್ಲ. ಮುಂದಿನ ಮೂರು ಪಂದ್ಯಗಳನ್ನು ಭಾರತ ತಂಡ ಗೆದ್ದು ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಟಿಕೆಟ್ ಪಡೆಯಿತು.
ಒಟ್ಟಿನಲ್ಲಿ ಭಾರತ ತಂಡ ಈ ಕೂಟದುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿಕೊಂಡು ಬಂದಿದೆ. ಸರಣಿ ಸೋಲಾಗಿದ್ದು ಕೇನ್ ವಿಲಿಯಮ್ಸನ್ ಪಡೆಯ ವಿರುದ್ಧ ಮಾತ್ರ. ಇದೀಗ ಫೈನಲ್ ಪಂದ್ಯದಲ್ಲೂ ಅದೇ ವಿಲಿಯಮ್ಸನ್ ಪಡೆ ಭಾರತಕ್ಕೆ ಎದುರಾಗಿದೆ. 2019ರ ವಿಶ್ವಕಪ್ ಸೆಮಿ ಫೈನಲ್ ಸೋಲು ಮತ್ತು ಕಿವೀಸ್ ಸರಣಿ ಸೋಲು ಎರಡಕ್ಕೂ ಪ್ರತಿಕಾರ ತೀರಿಸುವ ಸಂದರ್ಭ ಎದುರಾಗಿದೆ.