ಟೆಸ್ಟ್ ಕ್ರಿಕೆಟ್‌ ಗೆ ಐತಿಹಾಸಿಕ ವಿಶ್ವಕಪ್ ಫೈನಲ್ ಸಂಭ್ರಮ, ನಾಳೆ ಚೊಚ್ಚಲ ಟೆಸ್ಟ್ ವಿಶ್ವಕಪ್ ಪಂದ್ಯದ ಅಂತಿಮ ಹಣಾಹಣಿ, ಯಶಸ್ಸಿನ ಶಿಖರಕ್ಕೇರಲು ನ್ಯೂಝಿಲೆಂಡ್‌ ಹಾಗೂ ಭಾರತ ಕಾದಾಟ

ಟೆಸ್ಟ್ ಕ್ರಿಕೆಟ್‌ ಗೆ ಐತಿಹಾಸಿಕ ವಿಶ್ವಕಪ್ ಫೈನಲ್ ಸಂಭ್ರಮ, ನಾಳೆ ಚೊಚ್ಚಲ ಟೆಸ್ಟ್ ವಿಶ್ವಕಪ್ ಪಂದ್ಯದ ಅಂತಿಮ ಹಣಾಹಣಿ, ಯಶಸ್ಸಿನ ಶಿಖರಕ್ಕೇರಲು ನ್ಯೂಝಿಲೆಂಡ್‌ ಹಾಗೂ ಭಾರತ ಕಾದಾಟ

ಕ್ರಿಕೆಟ್‌ನಲ್ಲಿ ಬಹಳ ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ಗೂ ಒಂದು ವಿಶ್ವಕಪ್‌ ಬೇಕೆಂಬ ಬೇಡಿಕೆ ಕೇಳಿಬರುತ್ತಲೇ ಇತ್ತು. ಆದರೆ ಅದನ್ನು ಜಾರಿ ಮಾಡುವುದಕ್ಕೆ ಆಗಿರಲಿಲ್ಲ. ಟೆಸ್ಟ್‌ನ ಒಂದು ಪಂದ್ಯ 5 ದಿನಗಳ ಕಾಲ ನಡೆಯುವುದರಿಂದ, ಅದಕ್ಕೊಂದು ವಿಶ್ವಕಪ್‌ ನಡೆಸುವುದು ಬಹಳ ಕಷ್ಟದ ಕೆಲಸ ಎನ್ನುವುದು ಸರಳವಾದ ಉತ್ತರ. 2013ರಲ್ಲಿ ಆ ಪ್ರಸ್ತಾವನೆಯನ್ನು ಐಸಿಸಿ ಕೈಬಿಟ್ಟಿತ್ತು. ಕಡೆಗೂ 2019, ಆ.1ರಿಂದ ಕೂಟ ಶುರುವಾಗಿಯೇ ಬಿಟ್ಟಿತು. ಇದಕ್ಕೆ ಐಸಿಸಿ ಒಂದು ಸುಲಭ ದಾರಿ ಕಂಡುಕೊಂಡಿತು. ಏಕದಿನ, ಟಿ20 ವಿಶ್ವಕಪ್‌ನಂತೆ ಒಂದು ನಿರ್ದಿಷ್ಟ ಅವಧಿಯಲ್ಲಿ, ನಿರ್ದಿಷ್ಟ ದೇಶಗಳಲ್ಲಿ ನಡೆಸದೆ 2 ವರ್ಷಗಳ ಅವಧಿಯನ್ನು ನಿಗದಿ ಮಾಡಿತು. ಒಂದು ದೇಶ ವಿದೇಶಕ್ಕೆ ಹೋಗಿ ಆಡುವ, ತನ್ನದೇ ನೆಲದಲ್ಲಿ ಆಡುವ ಸರಣಿಗಳನ್ನು ವಿಶ್ವ ಚಾಂಪಿಯನ್‌ಶಿಪ್‌ ವ್ಯಾಪ್ತಿಯಲ್ಲಿ ಸೇರಿಸಿತು. 


ಪರಿಣಾಮ ಪ್ರಕ್ರಿಯೆ ಸುಲಭವಾಯಿತು. ಆ.1ರಿಂದ ಶುರುವಾದ ಮೊದಲನೆಯ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯ ಗೆದ್ದಿತ್ತು. ಹೀಗೆ ಶುಭಾರಂಭಗೊಂಡ ಕೂಟ ಕೊರೊನಾ ಕಾರಣದಿಂದಾಗಿ 2020ರಲ್ಲಿ ಪೂರ್ಣಪ್ರಮಾಣದಲ್ಲಿ ಹಾಳಾಯಿತು. ಎಷ್ಟೋ ಸರಣಿಗಳು ರದ್ದಾದವು. ಹಾಗೂ ಹೀಗೂ ನಡೆದಷ್ಟೇ ಸರಣಿಗಳ ಫ‌ಲಿತಾಂಶಗಳನ್ನಿಟ್ಟುಕೊಂಡು ಫೈನಲ್‌ಗೇರುವ ತಂಡಗಳನ್ನು ನಿರ್ಧಾರ ಮಾಡಲಾಯಿತು. ಹೀಗೆ ಫೈನಲ್‌ಗೇರಿದ್ದು ನ್ಯೂಜಿಲೆಂಡ್‌ ಹಾಗೂ ಭಾರತ. ಹಾಗೆಂದು ಭಾರತ ಅದೃಷ್ಟದ ಬಲದಿಂದ ಫೈನಲ್‌ ಗೇರಿಲ್ಲ. ವಿದೇಶ ಹಾಗೂ ಸ್ವದೇಶದಲ್ಲಿ ಬಲಾಡ್ಯ ತಂಡಗಳ ವಿರುದ್ಧ ಗೆದ್ದು ಅರ್ಹವಾಗಿಯೇ ಅಂತಿಮ ಪಂದ್ಯದಲ್ಲಿ ಸ್ಥಾನ ಪಡೆದಿದೆ.


ಕೊರೊನಾ ಕಾರಣದಿಂದ ಆರಂಭದಲ್ಲಿದ್ದ ಅಂಕಪದ್ಧತಿಯೇ ಬದಲಾಯಿತು. ಆ ಹಂತದಲ್ಲಿ ಭಾರತ ಫೈನಲ್‌ಗೇರುವುದೇ ಕಷ್ಟ ಎನ್ನುವಂತಾಗಿತ್ತು. ಅಂತಹ ಹೊತ್ತಿನಲ್ಲೂ ಇಂಗ್ಲೆಂಡ್‌ ನೀಡಿದ ಪ್ರಬಲ ಪೈಪೋಟಿಯನ್ನು ಮೀರಿ ಭಾರತ ಫೈನಲ್‌ಗೆ ಕಾಲಿಟ್ಟಿತು. ಇನ್ನೊಂದು ದಿಕ್ಕಿನಲ್ಲಿ ನ್ಯೂಜಿಲೆಂಡ್‌ ಸಹ ಬಲಿ ಷ್ಠ ತಂಡವೇ. ಅದೂ ಕೂಡ ತನ್ನ ಅತ್ಯುತ್ತಮ ಆಟವನ್ನು ಬಳಸಿಯೇ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದೆ. ಭಾರತಕ್ಕೆ ಹೋಲಿಸಿದರೆ ನ್ಯೂಜಿಲೆಂಡ್‌ ಅದೃಷ್ಟಶಾಲಿ ಎಂದು ಹೇಳದೇ ವಿಧಿಯಿಲ್ಲ. ಐಸಿಸಿಯ ಬದಲಾದ ಅಂಕಪದ್ಧತಿ ಆ ತಂಡದ ನೆರವಿಗೆ ಬಂದಿದೆ ಎಂಬ ಮಾತುಗಳೂ ಇವೆ.


ಇವೆಲ್ಲದರ ನಡುವೆ ಟೆಸ್ಟ್‌ ಕ್ರಿಕೆಟ್‌ ಐತಿಹಾಸಿಕ ಮುಖಾಮುಖೀಯೊಂದಕ್ಕೆ ಸಿದ್ಧವಾಗಿದೆ. ಜೂ.18ರಂದು ಇಂಗ್ಲೆಂಡ್‌ನ‌ ಸೌಥಾಂಪ್ಟನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಟೆಸ್ಟ್‌ ಇತಿಹಾಸ ಕಂಡ ಮೊದಲ ವಿಶ್ವಕೂಟ ಎನ್ನುವುದೊಂದು ಗಂಭೀರ ಸಂಗತಿಯಾದರೆ, ಅದರ ಫೈನಲ್‌ನಲ್ಲಿ ಭಾರತ ಅರ್ಹವಾಗಿಯೇ ಆಡುತ್ತಿದೆ ಎನ್ನುವುದನ್ನು ಮರೆಯುವಂತಿಲ್ಲ. 


ವಿಶ್ವಕಪ್ ಟೆಸ್ಟ್ ಫೈನಲ್: ಫೈನಲ್ ವರೆಗಿನ ಭಾರತದ ಪ್ರಯಾಣ ಹೇಗಿತ್ತು??  ನಿರೀಕ್ಷಿಸಿ... 

Previous Post Next Post