ಉಡುಪಿ ಜಿಲ್ಲೆ ಅನ್ ಲಾಕ್ ಪಟ್ಟಿಗೆ, ಏನುಂಟು? ಏನಿಲ್ಲ?

ಉಡುಪಿ ಜಿಲ್ಲೆ ಅನ್ ಲಾಕ್ ಪಟ್ಟಿಗೆ, ಏನುಂಟು? ಏನಿಲ್ಲ? 


ಉಡುಪಿ: ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕಾಗಿ ಈವರೆಗೆ ತೆಗೆದುಕೊಂಡ ಕಟ್ಟುನಿಟ್ಟಿನ ಹಾಗೂ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಜಿಲ್ಲೆಯ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆ ಕಂಡಿದ್ದು, ಇದರಂತೆ ಉಡುಪಿ ಜಿಲ್ಲೆಯನ್ನು ಕೆಟಗರಿ-2ರಿಂದ ಕೆಟಗರಿ-1ರ ಜಿಲ್ಲೆಯೊಂದಿಗೆ ಸೇರ್ಪಡೆಗೊಳಿಸಿ ರಾಜ್ಯ ಸರಕಾರ ನಿನ್ನೆ ಆದೇಶಿಸಿದ್ದು, ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದರಿಂದ ಜೂ.21ರವರೆಗೆ ಜಾರಿಯಲ್ಲಿದ್ದ ನಿರ್ಬಂಧಗಳು ಬಹುತೇಕ ಸಡಿಲಗೊಂಡಿದ್ದು, ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಸಿಆರ್‌ಪಿಸಿ ಸೆಕ್ಷನ್ 144(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಿದ ಆದೇಶದ ಪ್ರಮುಖಾಂಶಗಳು ಹೀಗಿವೆ.


>ಜಿಲ್ಲೆಯಾದ್ಯಂತ ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 5 ರವರೆಗೆ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ.
>ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ಕಟ್ಟುನಿಟ್ಟಿನ ವಾರಾಂತ್ಯ ಕರ್ಫ್ಯೂ.
>ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರವನ್ನು ಆಸನ ಸಾಮರ್ಥ್ಯದ ಶೇ.50ರಷ್ಟು ಮಾತ್ರ ತುಂಬುವಂತೆ, ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿನೊಂದಿಗೆ ಕಾರ್ಯನಿರ್ವಹಿಸಲು ಅನುಮತಿ.
>ಯಾವುದೇ ಬೇಧವಿಲ್ಲದೇ (ಅಗತ್ಯ-ಅಗತ್ಯವಿಲ್ಲದ) ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತೆರೆಯಲು ಅನುಮತಿ. ಆದರೆ ಯಾವುದೇ ಹವಾನಿಯಂತ್ರಿತ ಅಂಗಡಿಗಳು, ವಾಣಿಜ್ಯ ಸಂಕೀರ್ಣ, ಮಾಲ್‌ಗಳ ಕಾರ್ಯ ನಿರ್ವಹಣೆಗೆ ಅನುಮತಿ ಇರುವುದಿಲ್ಲ.

>ಜನರು ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಲು ಎಲ್ಲಾ ವಸ್ತುಗಳ ಹೋಮ್ ಡೆಲಿವರಿ ಸೇವೆಗೆ ದಿನದ 24 ಗಂಟೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅವಕಾಶ ನೀಡಲಾಗಿದೆ.
>ಹವಾನಿಯಂತ್ರಣ ವ್ಯವಸ್ಥೆ ಇಲ್ಲದೇ ಹೊಟೇಲ್, ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‌ಗಳಲ್ಲಿ (ಮದ್ಯಪಾನ ಹೊರತುಪಡಿಸಿ) ಕುಳಿತುಕೊಂಡು ಆಹಾರ ಸೇವಿಸಲು ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಶೇ.50 ಸಾಮರ್ಥ್ಯ ದೊಂದಿಗೆ ಅವಕಾಶ. ಲಾಡ್ಜ್ ಹಾಗೂ ರೆಸಾರ್ಟ್‌ಗಳಿಗೂ ಶೇ.50 ಸಾಮರ್ಥ್ಯ ದೊಂದಿಗೆ ಅವಕಾಶವಿದ್ದು, ಪಬ್‌ಗಳಿಗೆ ಅನುಮತಿ ಇರುವುದಿಲ್ಲ.
>ಎಲ್ಲಾ ಉತ್ಪಾದನಾ ಘಟಕಗಳು, ಕೈಗಾರಿಕಾ ಸಂಸ್ಥೆಗಳು, ಕೈಗಾರಿಕೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಲು ಅನುಮತಿ ಇದೆ. ಆದರೆ ಉಡುಪಿ ತಯಾರಿಕಾ ಘಟಕಗಳು ತಮ್ಮ ಸಾಮರ್ಥ್ಯದ ಶೇ.30ರಷ್ಟು ಸಿಬ್ಬಂದಿಗಳೊಂದಿಗೆ ಮಾತ್ರ ಕಾರ್ಯಾಚರಿಸ ಬೇಕು.
>ಕಟ್ಟಡ ನಿರ್ಮಾಣ ಹಾಗೂ ದುರಸ್ಥಿಗೆ ಅವಕಾಶವಿದೆ. ಅದಕ್ಕೆ ಸಂಬಂಧಿಸಿದ ಅಂಗಡಿಗಳೂ ಬೆಳಗ್ಗೆ 5-ಸಂಜೆ6ರವರೆಗೆ ಕಾರ್ಯಾಚರಿಸ ಬಹುದು. ವಾಕಿಂಗ್ ಮತ್ತು ಜಾಗಿಂಗ್‌ಗೆ ಉದ್ಯಾನವನಗಳು ಬೆಳಗ್ಗೆ 5ರಿಂದ ಸಂಜೆ 6ರವರೆಗೆ ತೆರೆದಿಡಬಹುದು. ಜಿಮ್‌ಗಳಿಗೂ ಶೇ.50 ಸಾಮರ್ಥ್ಯ ದೊಂದಿಗೆ ತೆರೆಯಲು ಅವಕಾಶವಿದೆ.
>ಗರಿಷ್ಠ ಇಬ್ಬರು ಪ್ರಯಾಣಿಕರೊಂದಿಗೆ ಟ್ಯಾಕ್ಸಿ ಹಾಗೂ ಅಟೋರಿಕ್ಷಾಗಳು ಸಂಚರಿಸಬಹುದು. ಪ್ರೇಕ್ಷಕರಿಗೆ ಅವಕಾಶ ನೀಡದೇ, ಹೊರಾಂಗಣ ಕ್ರೀಡೆಗಳಿಗೆ ಅನುಮತಿ ಇದೆ. ಸರಕಾರಿ ಹಾಗೂ ಖಾಸಗಿ ಕಚೇರಿಗಳು ಶೇ.50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು.
>ಹಿಂದಿನಂತೆ ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ 40 ಜನರೊಂದಿಗೆ ನಡೆಸಲು ಅನುಮತಿ ಇದೆ. ಶವ ಸಂಸ್ಕಾರವನ್ನು ಗರಿಷ್ಠ ಐದು ಜನರೊಂದಿಗೆ ನಿರ್ವಹಿಸಬಹುದು.

Previous Post Next Post