ಮೈಸೂರು ಹೊರತು ಪಡಿಸಿ ರಾಜ್ಯದ ಎಲ್ಲಾ ನ್ಯಾಯಾಲಯಗಳು ಇಂದಿನಿಂದ ಕಾರ್ಯಾರಂಭ
ಪ್ರತಿ ನ್ಯಾಯಾಲಯ ಪ್ರತ್ಯೇಕ ದಾವೆ ಪಟ್ಟಿ ತಯಾರಿಸಿ ದಿನವೊಂದಕ್ಕೆ 30 ಪ್ರಕರಣಗಳನ್ನು ವಿಚಾರಣೆ ನಡೆಸಬೇಕು. ಬೆಳಗ್ಗೆ ಹಾಗೂ ಮಧ್ಯಾಹ್ನ ತಲಾ 15 ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕು. ವಕೀಲರ ಅನುಪಸ್ಥಿತಿಯಲ್ಲಿ ಪ್ರಕರಣಗಳನ್ನು ನಿರ್ಧರಿಸುವುದನ್ನು ಆದಷ್ಟೂ ನ್ಯಾಯಾಲಯಗಳು ತಡೆಯಬೇಕು.
ಪ್ರತಿದಿನ ನ್ಯಾಯಾಲಯಗಳಿಗೆ ಐವರು ಸಾಕ್ಷಿಗಳ ಸಾಕ್ಷ್ಯ ದಾಖಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾಕ್ಷಿಗಳನ್ನು ಭೌತಿಕವಾಗಿ ನ್ಯಾಯಾಲಯಕ್ಕೆ ಕರೆದು ಸಾಕ್ಷ್ಯ ದಾಖಲಿಸಿಕೊಳ್ಳಬಹುದು. ಆರೋಪಿಗಳು ಜೈಲಿನಲ್ಲಿದ್ದರೆ 1973ರ ಸಿಆರ್‌ಪಿಸಿ ಸೆಕ್ಷನ್ 313ರ ಅಡಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ಹೇಳಿಕೆಗಳನ್ನು ಪಡೆಯಬೇಕು ಎಂದು ಎಸ್‌ಒಪಿಯಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿರುವ ಸಮನ್ಸ್ ಅಥವಾ ಆದೇಶದ ಪ್ರತಿ ಇಲ್ಲದೆ ಯಾವುದೇ ಸಾಕ್ಷಿಗಳು ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಅನುಮತಿ ಇಲ್ಲ. ಈ ಕುರಿತಂತೆ ಸಂಬಂಧಪಟ್ಟ ನ್ಯಾಯಾಲಯಗಳು ಆದೇಶ ಹೊರಡಿಸಲಿದ್ದು ಸಂಪೂರ್ಣ ಅವಶ್ಯಕತೆ ಹೊರತುಪಡಿಸಿ ನ್ಯಾಯಾಲಯಗಳು ಪಕ್ಷಗಳ ವೈಯಕ್ತಿಕ ಉಪಸ್ಥಿತಿಗೆ ಒತ್ತಾಯಿಸುವುದಿಲ್ಲ ಎಂದು ಎಸ್‌ಒಪಿ ತಿಳಿಸಿದೆ. ಪ್ರತಿ ನ್ಯಾಯಾಲಯ ಸಂಕೀರ್ಣಗಳಲ್ಲಿ ಸಾಕ್ಷಿಗಳು ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಪ್ರವೇಶದ್ವಾರದಲ್ಲಿ ಸಮನ್ಸ್/ ಆದೇಶ ಪ್ರತಿಯನ್ನು ಸಾಕ್ಷಿಗಳು ಒದಗಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ನೇಮಿಸಬೇಕು. ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ನ್ಯಾಯಾಲಯ ಆವರಣ ಪ್ರವೇಶಿಸುವ ಎಲ್ಲರಿಗೂ ದೇಹದ ಉಷ್ಣತಾ ಪರೀಕ್ಷೆ ಕಡ್ಡಾಯ. ಪ್ರಕರಣಗಳ ನೇರ ಮತ್ತು ಇ ಫೈಲಿಂಗ್‌ಗೆ ಮೇ 21ರಂದು ನೀಡಲಾಗಿದ್ದ ಅನುಮತಿ ಮುಂದುವರೆಯಲಿದೆ. ವಕೀಲರ ಸಂಘದ ಆವರಣ, ಕ್ಯಾಂಟೀನ್, ಆಹಾರ ಪೂರೈಕೆ ಘಟಕಗಳನ್ನು ಮುಂದಿನ ಆದೇಶದವರೆಗೆ ಮುಚ್ಚಿರತಕ್ಕದ್ದು. ವಕೀಲರ ಸಂಘ ಕಟ್ಟಡಗಳ ಸಮೀಪ ಮಾತ್ರ ಕಾಫಿ, ಟೀ, ಬಿಸ್ಕೆಟ್ ಮಾರಲು ಅವಕಾಶವಿದೆ. ಟೈಪಿಸ್ಟ್‌ಗಳು, ಜೆರಾಕ್ಸ್ ನಿರ್ವಾಹಕರ ಪ್ರವೇಶಕ್ಕೆ ಶೇ 50ರಷ್ಟು ನಿರ್ಬಂಧವಿದೆ ಇತ್ಯಾದಿ ಸೀಮಿತ ಅವಕಾಶಗಳೊಡನೆ ನ್ಯಾಯಾಲಯ ಕಾರ್ಯಾರಂಭವಾಗಲಿದೆ.
ಆದರೆ ಈ ಯಾವ ನಿಬಂಧನೆಗಳು ಮೈಸೂರು ಜಿಲ್ಲೆಯ ನ್ಯಾಯಾಲಯಗಳಿಗೆ ಅನ್ವಯವಾಗುವುದಿಲ್ಲ. ಅಲ್ಲಿ ಮೇ 21ರಂದು ಹೊರಡಿಸಲಾದ ಎಸ್‌ಒಪಿ ಮುಂದುವರೆಯಲಿದೆ ಎಂದು ಹೈಕೋರ್ಟ್ ಅಧಿಸೂಚನೆ ತಿಳಿಸಿದೆ.
ಹೈಕೋರ್ಟ್ ಪೀಠಗಳಿಗೆ ಪ್ರತ್ಯೇಕ ಎಸ್‌ಒಪಿ
ಹೈಕೋರ್ಟ್‌ನ ಪ್ರಧಾನ ಪೀಠ (ಬೆಂಗಳೂರು), ಧಾರವಾಡ ಪೀಠ ಹಾಗೂ ಗುಲ್ಬರ್ಗ ಪೀಠಗಳಿಗೆ ಪ್ರತ್ಯೇಕವಾದ ಎಸ್‌ಒಪಿ ಜಾರಿ ಮಾಡಲಾಗಿದೆ. ಎಲ್ಲಾ ಬಗೆಯ ಪ್ರಕರಣಗಳನ್ನು ಹೈಕೋರ್ಟ್‌ನ ಎಲ್ಲಾ ಪೀಠಗಳು ಹೈಬ್ರಿಡ್ ವಿಧಾನದಲ್ಲಿ ವಿಚಾರಣೆ ನಡೆಸಬೇಕು. ಆದರೆ ಪಾರ್ಟೀಸ್ ಇನ್- ಪರ್ಸನ್ ಆನ್‌ಲೈನ್ ಮೂಲಕವೇ ಹಾಜರಾಗಬೇಕಿದ್ದು ಅವರ ಭೌತಿಕ ಉಪಸ್ಥಿತಿಗೆ ಅನುಮತಿ ನೀಡಿಲ್ಲ. ವಕೀಲ ಸಮುದಾಯ ಆನ್‌ಲೈನ್ ವಿಧಾನವನ್ನೇ ಅನುಸರಿಸಲಿ ಎಂದು ತಿಳಿಸಲಾಗಿದೆ.
ಹೈಕೋರ್ಟ್ ಪ್ರವೇಶಿಸುವುದಕ್ಕೆ ಪಾಲಿಸಬೇಕಾದ ನಿಯಮಗಳು, ಫೈಲಿಂಗ್ ಕೌಂಟರ್‌ಗಳು, ಇ- ಫೈಲಿಂಗ್ ವಿಧಾನ, ಮುಂದೂಡಿಕೆ ಕುರಿತ ಮೆಮೊಗಳ ಕುರಿತಂತೆ ಎಸ್‌ಒಪಿಯಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಅಲ್ಲದೆ ನೋಟರಿಗಳು, ಓತ್ ಕಮಿಷನರ್‌ಗಳು ಹಾಗೂ ತಕರಾರು ಕಚೇರಿಗೆ ಅಗತ್ಯವಾದ ಸ್ಥಳಾವಕಾಶ, ಸಿಬ್ಬಂದಿ ಕೈಗೊಳ್ಳಬೇಕಾದ ಕ್ರಮಗಳು, ಸಾಮಾನ್ಯ ಸೂಚನೆಗಳು ಹಾಗೂ ಬದಲಾದ ರೋಸ್ಟರ್ ಪ್ರಕಾರ ವಿಚಾರಣೆ ನಡೆಸಲಿರುವ ಪೀಠಗಳ ಬಗ್ಗೆ ಸೂಚನೆಗಳನ್ನು ಒದಗಿಸಲಾಗಿದೆ.
Click Here ಹೆಚ್ಚಿನ ಸುದ್ದಿ ಓದಿ
SSLC ಪರೀಕ್ಷೆಗೆ ದಿನಾಂಕ ಘೋಷಣೆ, ಇಂದು ವೇಳಾಪಟ್ಟಿ ಪ್ರಕಟ ಸಾಧ್ಯತೆ
ಬೆಂಗಳೂರು: ಎಸ್‌ಎಸ್‌ಎಲ್ಸಿ ಪರೀಕ್ಷೆ ಜುಲೈನಲ್ಲಿ ನಡೆಯಲಿದ್ದು, ಇಂದು ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಇಂದು ಎಲ್ಲಾ ಜಿಲ್ಲಾಧಿಕಾರಿಳು, ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.
ಜುಲೈ ಮೂರನೇ ವಾರ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಗೆ 15 ರಿಂದ 20 ದಿನಗಳ ಮೊದಲು ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಲಾಗಿತ್ತು. ಅಂತೆಯೇ, ಇಂದು ಸಚಿವರು ಸಭೆ ನಡೆಸಿ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತಾಗಿ ಸಮಾಲೋಚನೆ ನಡೆಸಲಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆ, ಕೈಗೊಂಡಿರುವ ಮುಂಜಾಗ್ರತೆ ಕ್ರಮ, ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ, ಮಾರ್ಗಸೂಚಿ ಪಾಲನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.