ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ
ಟೋಕಿಯೋ(ಜು.23): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮೊದಲಿಗೆ ಒಲಂಪಿಕ್ ಆತಿಥೇಯ ರಾಷ್ಟ್ರ ಜಪಾನಿನ ರಾಷ್ಟ್ರಧ್ವಜವನ್ನು ಟೋಕಿಯೋದ ನ್ಯಾಷನಲ್ ಸ್ಟೇಡಿಯಂನ ಮಧ್ಯಭಾಗಕ್ಕೆ ತಂದು ರಾಷ್ಟ್ರಗೀತೆಯೊಂದಿಗೆ ಧ್ವಜರೋಹಣ ಮಾಡಲಾಯಿತು.
ಕೋವಿಡ್ ಮುನ್ನೆಚ್ಚರಿಕೆಯ ಉದ್ದೇಶದಿಂದ ಕೇವಲ ಒಂದು ಸಾವಿರ ವಿವಿಐಪಿಗಳಿಗೆ ಮಾತ್ರ ಈ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸಲು ಆಹ್ವಾನ ನೀಡಲಾಗಿತ್ತು. ಇನ್ನು ಇದೇ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕೋವಿಡ್ 19 ವೈರಸ್‌ನಿಂದ ಕೊನೆಯುಸಿರೆಳೆದ ಜನರನ್ನು ಸ್ಮರಿಸಿಕೊಳ್ಳಲಾಯಿತು. ಹಾಗೆಯೇ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕೊನೆಯುಸಿರೆಳೆದ ಇಸ್ರೇಲಿ ಅಥ್ಲೀಟ್‌ಗಳನ್ನು ಸ್ಮರಿಸಿ ಕ್ಷಣಕಾಲ ಮೌನಾಚಾರಣೆ ಮಾಡಲಾಯಿತು.
ಇದೇ ವೇಳೆ ಕ್ರೀಡೆಯ ಮೂಲಕ ಶಿಕ್ಷಣ, ಅಭಿವೃದ್ದಿ, ಸಂಸ್ಕೃತಿ ಹಾಗೂ ಶಾಂತಿಗಾಗಿ ಶ್ರಮಿಸಿದ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್‌ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಒಲಿಂಪಿಕ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜಪಾನಿನ ಕಲಾವಿದರು 32ನೇ ಒಲಿಂಪಿಕ್ಸ್‌ಗೆ ಆರ್ಕೇಸ್ಟ್ರಾ ಪ್ರದರ್ಶನದ ಮೂಲಕ ಸ್ವಾಗತಿಸಿದರು.
ಮೊದಲಿಗೆ ಗ್ರೀಸ್ ದೇಶದ ಅನ್ನಾ ಕೊರಾಕಾಕಿ ಧ್ವಜ ಹಿಡಿದು ಟೋಕಿಯೋ ನ್ಯಾಷನಲ್ ಸ್ಟೇಡಿಯಂ ಪ್ರವೇಶಿಸಿತು. ಇದರ ಬೆನ್ನಲ್ಲೇ ರೆಪ್ಯೂಜಿ ಒಲಿಂಪಿಕ್ ಟೀಂ ಸ್ಟೇಡಿಯಂ ಪ್ರವೇಶಿಸಿತು.
ಭಾರತದ ಅದ್ದೂರಿ ಎಂಟ್ರಿ: ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಈ ಬಾರಿ ಮಹಿಳೆ ಹಾಗೂ ಪುರುಷ ಅಥ್ಲೀಟ್ ಧ್ವಜಧಾರಿಯಾಗಿ ಕಾಣಿಸಿಕೊಂಡರು. ಅದರಂತೆ ಭಾರತ ಪರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹಾಗೂ ಮಹಿಳಾ ಬಾಕ್ಸರ್ ಮೇರಿ ಕೋಮ್ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೈದಾನ ಪ್ರವೇಶಿದರು. ಇವರ ಜತೆ 18 ಕ್ರೀಡಾಪಟುಗಳು, 6 ಅಧಿಕಾರಿಗಳು ಸೇರಿ ಒಟ್ಟು 26 ಮಂದಿ ದೇಶದ ತ್ರಿವರ್ಣ ಬಾವುಟ ಹಿಡಿದು ಮೈದಾನ ಪ್ರವೇಶಿಸಿತು.