ಮುಂದುವರಿದ ಮಳೆ ಆರ್ಭಟ, ನಾಲ್ಕು ದಿನ ರಾಜ್ಯದಲ್ಲಿ ಮತ್ತೆ ಭಾರಿ ಮಳೆ, ಅಲರ್ಟ್ ಘೋಷಣೆ

ಮುಂದುವರಿದ ಮಳೆ ಆರ್ಭಟ, ನಾಲ್ಕು ದಿನ ರಾಜ್ಯದಲ್ಲಿ ಮತ್ತೆ ಭಾರಿ ಮಳೆ, ಅಲರ್ಟ್ ಘೋಷಣೆ  


ರಾಜ್ಯದಲ್ಲಿ ಈಗಾಗಲೆ ವರುಣನ ಅಬ್ಬರ ಜೋರಾಗಿದೆ. ಇನ್ನು 4 ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 


ಕರ್ನಾಟಕದಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಕಳೆದ ಹತ್ತು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ (Karnataka Rain). ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ಮೈದುಂಬಿಕೊಂಡಿವೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮಳೆ ಸುರಿಯಲಿದೆ (Monsoon 2021) ಎಂದು ಹವಾಮಾನ ಇಲಾಖೆ ಕೆಲ ದಿನಗಳ ಹಿಂದೆಯೇ ಮುನ್ಸೂಚನೆ (Weather Forecast) ನೀಡಿತ್ತು. ಇದೀಗ ಕನಿಷ್ಟ ಜುಲೈ 21ರ ತನಕ ಮಳೆಯ ವಾತಾವರಣ ಏರಿಳಿತದೊಂದಿಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಕರ್ನಾಟಕದಲ್ಲಿ ನಾಳೆ (ಜುಲೈ 19) ಹಾಗೂ ಜುಲೈ 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು ಪರೀಕ್ಷಾ ಕೇಂದ್ರಗಳಿಗೆ ತೆರಳುವಾಗ ಮಕ್ಕಳು ಜಾಗ್ರತೆಯಿಂದ ಹೋಗುವಂತೆ ನೋಡಿಕೊಳ್ಳಬೇಕಿದೆ.


ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಜುಲೈ 21ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗ ಕೆಲವೆಡೆ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜು.18 ಮತ್ತು 21ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ.


4 ದಿನ ವ್ಯಾಪಕ ಮಳೆ ಸಾಧ್ಯತೆ : ಮಲೆನಾಡಿಗೆ ಆರೆಂಜ್‌ ಅಲರ್ಟ್


ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಇದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.


ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ ಇದ್ದು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಜು.19 ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.


ಕೇರಳದಿಂದ ಮಹಾರಾಷ್ಟ್ರದ ಕಡೆಗೆ ವೇಗವಾದ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಅದರ ಪ್ರಭಾವದಿಂದ ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಧಾರಾಕಾರ ಮಳೆಯಾಗಲಿದೆ. ಜತೆಗೆ ದಕ್ಷಿಣ ಒಳನಾಡಿನಲ್ಲೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಒಂದು ವಾರದ ತನಕ ಇದೇ ರೀತಿ ಮಳೆಯ ವಾತಾವರಣ ಮುಂದುವರೆಯಲಿದ್ದು ನಂತರ ಕಡಿಮೆಯಾಗುವ ನಿರೀಕ್ಷೆ ಇದೆ.


ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಕೆಲ ದಿನಗಳಿಂದ ಮಲೆನಾಡು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸೂಕ್ತ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿದೆ. ಸದ್ಯದ ಮಾಹಿತಿ ಪ್ರಕಾರ ಇಂದು ಮತ್ತು ನಾಳೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ಭಾರೀ ಮಳೆಯ ನಿರೀಕ್ಷೆಯಿದೆ.


ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಬೆಳಗ್ಗೆಯಿಂದಲೂ ತುಂತುರು ಮಳೆಯಾಗುತ್ತಿದೆ.


Read more

Previous Post Next Post