ಶೇಕಡಾ 2ಕ್ಕಿಂತ ಕಡಿಮೆ ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ 9 , 10, ಪಿಯುಸಿ ತರಗತಿಗಳು ಆರಂಭ: ಸಿಎಂ ಬಸವರಾಜ್
ಬೆಂಗಳೂರು : ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹಾಗೂ ಗಡಿ ಭಾಗದ ತಾಲೂಕಿನಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ, ಒಂದು ವಾರ ಕಾಲ ಶಾಲೆ ಮುಚ್ಚಿ, ಸ್ವಚ್ಛಗೊಳಿಸಿದ ನಂತರ ತೆರೆಯಲು ಕ್ರಮ ವಹಿಸಲಾಗುವುದು, ಶಾಲಾ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಆದ್ಯತೆ ಮೇರೆಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಕೊವಿಡ್ ನಿರ್ವಹಣೆಗೆ ಜಿಲ್ಲಾವಾರು ಯೋಜನೆ ರೂಪಿಸಲು ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗುವುದು ಎಂದರು.