3 ಜಿಲ್ಲೆಗಳು ಹೊರತುಪಡಿಸಿ ನಾಳೆಯಿಂದ ಶಾಲಾ ಕಾಲೇಜ್ ಆರಂಭ, 9 ರಿಂದ 12 ನೇ ತರಗತಿಗಳು

3 ಜಿಲ್ಲೆಗಳು ಹೊರತುಪಡಿಸಿ ನಾಳೆಯಿಂದ ಶಾಲಾ ಕಾಲೇಜ್ ಆರಂಭ, 9 ರಿಂದ 12 ನೇ ತರಗತಿಗಳು


ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ಸೋಮವಾರದಿಂದ 9 ರಿಂದ 12 ನೇ ತರಗತಿಗಳಲ್ಲಿ ಭೌತಿಕ ಪಾಠ ಪ್ರಾರಂಭವಾಗಲಿದೆ. ಇದಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 9 ಮತ್ತು 10 ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆ ಅರ್ಧ ದಿನ ಮಾತ್ರ ಭೌತಿಕ ತರಗತಿ ನಡೆಯಲಿವೆ.


ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ, ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.50 ರವರೆಗೆ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಮತ್ತು ಕೊಠಡಿಯ ಲಭ್ಯತೆ ನೋಡಿಕೊಂಡು 15 ರಿಂದ 20 ಜನರ ತಂಡ ಮಾಡಿ ಭೌತಿಕ ತರಗತಿ ನಡೆಸಲು ತಿಳಿಸಲಾಗಿದೆ.


ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ದಿನ ಆಫ್ಲೈನ್ ಕ್ಲಾಸ್ ಗಳು ಮತ್ತು ಮೂರು ದಿನ ಆನ್ಲೈನ್ ಕ್ಲಾಸ್ ಗಳು ನಡೆಯಲಿವೆ. ಶೇಕಡ 50 ರಷ್ಟು ವಿದ್ಯಾರ್ಥಿಗಳು ಸೋಮವಾರ, ಮಂಗಳವಾರ, ಬುಧವಾರ ತರಗತಿಗೆ ಹಾಜರಾಗಬೇಕಿದೆ. ಉಳಿದ ವಿದ್ಯಾರ್ಥಿಗಳು ಗುರುವಾರ, ಶುಕ್ರವಾರ, ಶನಿವಾರ ಕಾಲೇಜಿಗೆ ಬರಬೇಕಿದ್ದು, ಉಳಿದ ಮೂರು ದಿನ ಆನ್ಲೈನ್ ತರಗತಿ ನಡೆಯಲಿವೆ


ಪಾಸಿಟಿವಿಟಿ ದರ ಶೇಕಡ 2 ಕ್ಕಿಂತ ಹೆಚ್ಚಾಗಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಶಾಲೆಗಳ ಆರಂಭಿಸುವುದಿಲ್ಲ ಎಂದು ಸರಕಾರ ಹೇಳಿದೆ. 


ಮೊದಲು ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಐದು ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವುದಿಲ್ಲ ಎಂದಿತ್ತು. ಆದರೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಕಂಡುಬಂದ ಹಿನ್ನೆಲೆಯಲ್ಲಿ ಇಲ್ಲಿ ಸೋಮವಾರ ತರಗತಿ ಆರಂಭಿಸಲಾಗುತ್ತಿದೆ. ಪ್ರಸಕ್ತ ವಾರದ ಕೊರೊನಾ ವಾರ್‌ ರೂಂ ಬುಲೆಟಿನ್‌ ಪ್ರಕಾರ, ದಕ್ಷಿಣ ಕನ್ನಡ (ಶೇ. 3.2), ಉಡುಪಿ (ಶೇ. 2.8), ಕೊಡಗು (ಶೇ. 2.3) ಜಿಲ್ಲೆಗಳು ಮಾತ್ರ ಶೇ. 2ಕ್ಕಿಂತ ಅಧಿಕ ಪಾಸಿಟಿವಿಟಿ ದರ ಹೊಂದಿವೆ.


ಮುಂದೆ ಓದಿ

Previous Post Next Post