ಸೋಮವಾರದಿಂದ ಶಾಲೆ ಆರಂಭ, ಮೊದಲ ಹಂತದಲ್ಲಿ 9 , 10 ಪಿಯುಸಿ ತರಗತಿಗಳು ಶುರು

ಸೋಮವಾರದಿಂದ ಶಾಲೆ ಆರಂಭ, ಮೊದಲ ಹಂತದಲ್ಲಿ 9 , 10  ಪಿಯುಸಿ ತರಗತಿಗಳು ಶುರು


ಬೆಂಗಳೂರು: ಕೊರೊನಾ ದೆಸೆಯಿಂದ ಅಸ್ತವ್ಯಸ್ತಗೊಂಡಿರುವ ಶಿಕ್ಷಣ ಪದ್ಧತಿಯನ್ನು ಸರಿದಾರಿಗೆ ತರಲು ಸರ್ಕಾರ ಹರಸಾಹಸಪಡುತ್ತಿದೆ. ಅದರ ಫಲವಾಗಿ ಕೊವಿಡ್​ 19 ಆತಂಕದ ನಡುವೆಯೂ ಆಗಸ್ಟ್​ 23ರಿಂದ ಶಾಲೆಗಳನ್ನು ಆರಂಭಿಸಲು ಕರ್ನಾಟಕದಲ್ಲಿ ಸಿದ್ಧತೆಗಳು ನಡೆದಿವೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಲೆ ಆರಂಭದ ಬಗ್ಗೆ ಸರ್ಕಾರಿ, ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಶಾಲೆ ಆರಂಭದ ದಿನ ಬೆಂಗಳೂರಿನ ಕೆಲ ಶಾಲೆಗಳಿಗೆ ನಾನು ಮತ್ತು ಶಿಕ್ಷಣ ಸಚಿವರು ಭೇಟಿ ನೀಡುತ್ತೇವೆ. ಶಿಕ್ಷಕರಿಗೆ ಕೊವಿಡ್ ಲಸಿಕೆಯನ್ನು (Corona Vaccine) ನೀಡಲಾಗಿದೆ. ಪೋಷಕರ ಸಮ್ಮತಿ ಪಡೆದು ಮಕ್ಕಳು ಯಾವುದೇ ಆತಂಕ ಇಲ್ಲದೆ ಶಾಲೆಗೆ ಬರಬಹುದು ಎಂದು ತಿಳಿಸಿದ್ದಾರೆ.


ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಂತಹಂತವಾಗಿ ಶಾಲೆ ಆರಂಭ ಮಾಡಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕರೂ ಸಹ ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಉಳಿದಂತೆ ಶಾಲೆ ಆರಂಭಕ್ಕೆ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಯಾವುದೇ ಗೊಂದಲ ಇಲ್ಲ. ಮಾರ್ಗಸೂಚಿ ಅನ್ವಯ ತರಗತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.


ಈ ಕೆಳಗಿನ ಜಿಲ್ಲೆಗಳಲ್ಲಿ 23ರಿಂದ ಶಾಲೆ ಆರಂಭ ಇಲ್ಲ


ಆಗಸ್ಟ್ 23 ರಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆ ಆರಂಭ ಮಾಡಲು ಸಿದ್ಧತೆ ನಡೆದಿದೆ. ಹಂತ ಹಂತವಾಗಿ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಮುಂದಾಗಿದ್ದು, ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತದೆ. ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ 9 ರಿಂದ 12 ನೇ ತರಗತಿಗಳಿಗೆ ಮೊದಲ ಹಂತದಲ್ಲಿ ಶಾಲೆ ಶುರುವಾಗಲಿದೆ.


ಮಾರ್ಗಸೂಚಿಯಲ್ಲಿ ಏನೇನಿದೆ?
ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಈಗಾಗಲೇ ಮಾರ್ಗಸೂಚಿ ನೀಡಿದ್ದು, ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು? ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಅದರಂತೆ ಪ್ರಮುಖ ನಿಯಮಗಳು ಇಂತಿವೆ:


1. ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್​ಡೌನ್
2. ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವಂತಿಲ್ಲ
3. ಕೊರೊನಾ ಲಕ್ಷಣ ಕಂಡು ಬರುವ ಮಗುವನ್ನು ಶಾಲೆಗೆ ಕಳುಹಿಸುವಂತಿಲ್ಲ
4. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ
5. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು
6. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬರಬೇಕು
7. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಪಡೆದ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು
8. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ
9. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಅವಕಾಶ ಸಾಧ್ಯತೆ
10. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ


ಶಾಲಾ ಪ್ರಾರಂಭದ ಪೂರ್ವದಲ್ಲಿ ಅನುಸರಿಸಬೇಕಾದ ಕ್ರಮಗಳು
ಸುಮಾರು ಒಂದು ವರ್ಷದಿಂದ ಶಾಲೆ ತೆರೆಯದ ಕಾರಣ ಶಾಲಾರಂಭಕ್ಕೂ ಮೊದಲು ಇಡಿ ಶಾಲೆ ಸ್ವಚ್ಛಗೊಳಿಸಬೇಕು. ಶಾಲೆಯ ಇಡಿ ಅವರಣ ಸ್ಯಾನಿಟೈಸ್ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ ಮಾಡಬೇಕು. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಶಾಲೆಯ ಶೌಚಾಲಯ ಶುಚಿಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಶಾಲಾ ಕೊಠಡಿ, ಅಡುಗೆ, ದಾಸ್ತಾನು ಕೊಠಡಿ ಎಲ್ಲವನ್ನು ಶುಚಿಗೊಳಿಸಬೇಕು.


ಶಾಲಾ ವಾಹನಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಬೇಕು. ಕೊಠಡಿಗಳಲ್ಲಿ ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು. ಮಕ್ಕಳ ಆಗಮನ ಮತ್ತು ನಿರ್ಗಮನದ ದಾರಿ ಪ್ರತ್ಯೇಕವಾಗಿ ಮಾಡಬೇಕು. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಶಾಲೆಯ ಅವರಣದಲ್ಲಿ ಬಾಕ್ಸ್ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರವೇಶ ಮಾಡಬೇಕು. ಶಾಲಾ ಪ್ರವೇಶಕ್ಕೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.


ವಿದ್ಯಾರ್ಥಿಗಳೇ ನೆನಪಿಡಿ
ಸಾಮಾಜಿಕ ಅಂತರ ಕಾಪಾಡುವುದರ ಜೊತೆ ಆಗಾಗ ಕೈ ತೊಳೆಯಬೇಕು. ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ರೂಢಿ ಮಾಡಿಕೊಳ್ಳಬೇಕು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ನೀರನ್ನು ತರಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಪೆನ್, ನೋಟ್ ಬುಕ್, ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುವನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಬಾರದು.

Previous Post Next Post