ಮುನ್ಸೂಚನೆ ಪ್ರಕಾರ ಐದು ದಿನ ಪೈಕಿ ಮೊದಲ ಮೂರು ದಿನ ಕರಾವಳಿಯಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬೀಳಲಿದೆ. ನ.20ರಂದು ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಬೀದರ್ ಹೊರತುಪಡಿಸಿ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು (Chikkamagaluru), ಹಾಸನ, ಶಿವಮೊಗ್ಗ (Shivamogga), ಕೊಡಗು (kodagu) ಹಾಗೂ ಚಿತ್ರದುರ್ಗ (Chitradurga), ಬಳ್ಳಾರಿ (Ballary) ಜಿಲ್ಲೆಗಳಲ್ಲಿ ನ.21 ಮತ್ತು ನ.22ರಂದು ಭಾರಿ ಮಳೆ ಸುರಿಯಲಿದ್ದು, 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಇದೆ ವೇಳೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಿಂಗಾರಿನ ಅಬ್ಬರ ತುಸು ಕ್ಷೀಣಿಸಲಿದ್ದು, ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಭಾರಿ ಮಳೆ ದಾಖಲು:
ಶುಕ್ರವಾರ 'ಆರೆಂಜ್ ಅಲರ್ಟ್' (orange alert) ಪಡೆದಿದ್ದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಸಾಕಷ್ಟುಪ್ರದೇಶದಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆ ದಾಖಲಾಗಿದೆ. ಉತ್ತರ ಒಳನಾಡಿನ ಕೆಲವೆಡೆ ವ್ಯಾಪಕ ಮತ್ತಿತರ ಪ್ರದೇಶಗಳಲ್ಲಿ ಹಗುರ ಮಳೆ ದಾಖಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಅಧಿಕ 18 ಸೆಂ.ಮೀ, ತುಮಕೂರಿನ ಗುಬ್ಬಿ, ಕೋಲಾರ ಮತ್ತು ತುಮಕೂರಿನಲ್ಲಿ (Tumakuru) ತಲಾ 15ಸೆಂ.ಮೀ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ತಲಾ 12, ಕೋಲಾರದ ಶ್ರೀನಿವಾಸಪುರ ಮತ್ತು ಮುಳಬಾಗಿಲಲ್ಲಿ ತಲಾ 11ಸೆಂ.ಮೀ.ಮಳೆ ಬಿದ್ದಿದೆ.
ಬೆಂಗಳೂರು ಗ್ರಾಮಾಂತರ ಭಾಗದ ಹೊಸಕೋಟೆ, ತುಮಕೂರಿನ ಚಿಕ್ಕನಾಯಕಹಳ್ಳಿ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ತಲಾ 10ಸೆಂ.ಮೀ. ಮಳೆ ಸುರಿದಿದ್ದು, ಉಳಿದೆಡೆ ಸಾಧಾರಣದಿಂದ ಭಾರಿ ಮಳೆ ಆಗಿದೆ. ರಾಜ್ಯದ ಗರಿಷ್ಠ ತಾಪಮಾನ ಬಳ್ಳಾರಿಯಲ್ಲಿ 30.6 ಮತ್ತು ಕನಿಷ್ಠ ತಾಪಮಾನ ಹಾಸನದಲ್ಲಿ 17.6ಡಿಗಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ತಜ್ಞ ಸದಾನಂದ ಅಡಿಗ ತಿಳಿಸಿದ್ದಾರೆ.
ಹಿಂಗಾರು ಅಬ್ಬರ :
ಬಂಗಾಳ ಕೊಲ್ಲಿಯಲ್ಲಿ (Bay Of Bengal) ವಾಯುಭಾರ ಕುಸಿತದಿಂದಾಗಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿರುವುದರಿಂದ ರಾಜ್ಯಾದ್ಯಂತ ಕೃಷಿಗೆ (Agriculture) ಅಪಾರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜೊತೆಗೆ, ಮಳೆ ಸಂಬಂಧಿ ಕಾರಣಗಳಿಗಾಗಿ ಒಟ್ಟಾರೆ 75ಕ್ಕೂ ಹೆಚ್ಚು ಕುರಿ, 10ಕ್ಕೂ ಹೆಚ್ಚು ಹಸು ಮತ್ತು ಎಮ್ಮೆಗಳು ಮೃತಪಟ್ಟಿದ್ದು, ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏತನ್ಮಧ್ಯೆ ಸತತ ಮಳೆಯಿಂದಾಗಿ ಬುಧವಾರ ಮತ್ತೆ ವಿವಿಧೆಡೆ 70ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಳಗಾವಿ, ಚಿತ್ರದುರ್ಗ (Chitradurga), ದಾವಣಗೆರೆ, ಚಾಮರಾಜನಗರ, ಮೈಸೂರು, ಧಾರವಾಡ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದರೆ, ರಾಜಧಾನಿ ಬೆಂಗಳೂರು, ಕೋಲಾರ, ಹಾವೇರಿ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಕೆಲವೆಡೆ ಸಾಧಾರಣ ಮತ್ತು ತುಂತುರು ಮಳೆಯಾಗಿದೆ.
ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ ಮತ್ತು ಚಿತ್ರದುರ್ಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆ ತೀವ್ರ ಅವಾಂತರ ಸೃಷ್ಟಿಸಿದೆ. ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳಿ ಸೇರಿ ಜಿಲ್ಲೆಯ ಬಹುಭಾಗದಲ್ಲೂ ಮಂಗಳವಾರ ರಾತ್ರಿಯಿಂದ ಮಳೆಯಾಗುತ್ತಿದ್ದು, ಸುಮಾರು 715 ಎಕರೆ ಬತ್ತದ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಎರಡು ಎಕರೆ ಭತ್ತ, ಹೊಸದುರ್ಗದಲ್ಲಿ ಎರಡು ಎಕರೆ ರಾಗಿ ಬೆಳೆ ಹಾನಿಯಾಗಿದೆ.