ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ

ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ 


ನವದೆಹಲಿ (ಜ. 8): 
ಏರುತ್ತಿರುವ ಕೋವಿಡ್-19 ಪ್ರಕರಣಗಳ ಆತಂಕದ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಮಹತ್ವದ ಉತ್ತರ ಪ್ರದೇಶ (Uttar Pradesh) ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಶನಿವಾರ ಘೋಷಣೆ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Chief Election Commissioner Sushil Chandra), ಉತ್ತರ ಪ್ರದೇಶ, ಉತ್ತರಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದರು.


ಉತ್ತರ ಪ್ರದೇಶದಲ್ಲಿ ಏಳೂ ಹಂತದಲ್ಲಿ ಚುನಾವಣೆ ನಡೆಯಲಿದ್ದರೆ, ಮಣಿಪುರದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಉಳಿದಂತೆ ಗೋವಾ, ಪಂಜಾಬ್ ಹಾಗೂ ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದೆ.



ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಎಲ್ಲಾ ಏಳೂ ಹಂತದಲ್ಲಿ (ಫೆಬ್ರವರಿ 10, 14, 20, 23, 27 ಮಾರ್ಚ್ 3, 7) ಚುನಾವಣೆ ನಡೆಯಲಿದ್ದರೆ, 117 ಕ್ಷೇತ್ರಗಳಿರುವ ಪಂಜಾಬ್, 70 ಕ್ಷೇತ್ರಗಳಿರುವ ಉತ್ತರಾಖಂಡ ಹಾಗೂ 40 ಕ್ಷೇತ್ರಗಳಿರುವ ಗೋವಾದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಈಶಾನ್ಯ ರಾಜ್ಯ ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 27 ಹಾಗೂ ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಆರ್ಚ್ 10 ರಂದು ಪಂಚ ರಾಜ್ಯ ಚುನಾವಣೆಯ ಫಲಿತಾಂಶವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಲಿದೆ.


5 ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 18.34 ಕೋಟಿ ಮತದಾರರು ಈ ಬಾರಿಯ ಹಕ್ಕು ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಆಯೋಗ ಹೇಳಿದೆ. ಈ ಎಲ್ಲಾ ರಾಜ್ಯಗಳಿಂದ 24.5 ಲಕ್ಷ ಹೊಸ ಮತದಾರರು ಇದೇ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದೆ. ಕೋವಿಡ್ ಕಾರಣದಿಂದಾಗಿ ಪ್ರತಿ ಮತಗಟ್ಟೆಯಲ್ಲಿ 1250 ಮಾತ್ರವೇ ಮತ ಚಲಾಯಿಸಬಹುದಾಗಿದೆ. ಇನ್ನು ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ನಾಮಪತ್ರ ಸಲ್ಲಿಸುವ ಅವಕಾಶವನ್ನೂ ಆಯೋಗ ನೀಡಿದೆ. ಕೋವಿಡ್ ಪಾಸಿಟಿವ್ ಆದ ವ್ಯಕ್ತಿಗಳು, 80 ವರ್ಷಕ್ಕಿಂತ ಹಿರಯ ವ್ಯಕ್ತಿಗಳು ಹಾಗೂ ದಿವ್ಯಾಂಗ ವ್ಯಕ್ತಿಗಳಿಗೆ ಅಂಚೆಯ ಮೂಲಕ ಮತ ಹಾಕುವ ವ್ಯವಸ್ಥೆ ಇರಲಿದೆ.


ಕಳೆದ ಆರು ತಿಂಗಳಿನಿಂದ ಪಂಚ ರಾಜ್ಯ ಚುನಾವಣೆಗಾಗಿ ಚುನಾವಣಾ ಅಯೋಗ ತಯಾರಿ ನಡೆಸುತ್ತಿತ್ತು. ಕಳೆದ ಡಿಸೆಂಬರ್ ನಲ್ಲಿ ಎಲ್ಲಾ ರಾಜ್ಯಗಳಿಗೆ ಆಯೋಗ ಭೇಟಿ ನೀಡಿದ್ದಲ್ಲದೆ, ರಾಜಕೀಯ ಪಕ್ಷಗಳೊಂದಿಗೆ ಮಾತನಾಡಿ ದಿನಾಂಕಗಳನ್ನು ಪ್ರಕಟ ಮಾಡಲಾಗಿದೆ ಎಂದು ತಿಳಿಸಿದರು. ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಸಮಯದಲ್ಲಿ ಎಲ್ಲಾ ಸೂಕ್ತ ಎಚ್ಚರಿಕೆಯೊಂದಿಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು.



ಚುನಾವಣಾ ಸಿಬ್ಬಂದಿಗೆ ಸಕಲ ವ್ಯವಸ್ಥೆ
ಚುನಾವಣಾ ಸಿಬ್ಬಂದಿ ಡಬಲ್ ಡೋಸ್ ಲಸಿಕೆ ಪಡೆದಿರಬೇಕು
ಚುನಾವಣಾ ತೆರಳುವ ಸಿಬ್ಬಂದಿಗೆ ಬೂಸ್ಟರ್ ಡೋಸ್ ಹಾಗೂ ಮುನ್ನೆಚ್ಚರಿಕೆಯ ಡೋಸ್
ಎಲ್ಲಾ ಚುನಾವಣಾ ಸಿಬ್ಬಂದಿಯನ್ನು ಫ್ರಂಟ್ ಲೈನ್ ವರ್ಕರ್ ಆಗಿ ಪರಿಗಣನೆ



ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ಹೈಲೆಟ್ಸ್

* ಜನವರಿ 14ಕ್ಕೆ ಅಧಿಸೂಚನೆ ಪ್ರಕಟ
* ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
* ಫೆ. 10ಕ್ಕೆ ಮೊದಲ ಹಂತದ ಮತದಾನ
* ಪಂಜಾಬ್, ಉತ್ತರಾಖಂಡ್, ಗೋವಾ ರಾಜ್ಯಗಳಿಗೆ ಒಂದೇ ಹಂತದಲ್ಲಿ ಮತದಾನ
* ಫೆಬ್ರವರಿ 14: ಎರಡನೇ ಹಂತದ ಮತದಾನ
* ಫೆಬ್ರವರಿ 24: ಮೂರನೇ ಹಂತದ ಮತದಾನ
* ಮಾರ್ಚ್ 10ಕ್ಕೆ ಪಂಚ ರಾಜ್ಯಗಳ ಫಲಿತಾಂಶ



ಒಟ್ಟಾರೆ ಐದು ರಾಜ್ಯಗಳಲ್ಲಿ 7 ಹಂತದಲ್ಲಿ ಚುನಾವಣೆ
* ಮೊದಲ ಹಂತ: ಫೆಬ್ರವರಿ 10
* 2ನೇ ಹಂತ: ಫೆಬ್ರವರಿ 14
* ಮೂರನೇ ಹಂತ: ಫೆಬ್ರವರಿ 20
* ನಾಲ್ಕನೇ ಹಂತ: ಫೆಬ್ರವರಿ 23
* ಐದನೇ ಹಂತ: ಫೆಬ್ರವರಿ 27
* ಆರನೇ ಹಂತ: ಮಾರ್ಚ್ 3
* ಏಳನೇ ಹಂತ: ಮಾರ್ಚ್ 7
* ಮತ ಎಣಿಕೆ: ಮಾರ್ಚ್ 10

Previous Post Next Post