ದೇಶ ರಕ್ಷಣೆಗಿಳಿದ ಉಕ್ರೇನ್ ಅಧ್ಯಕ್ಷ: ಸೇನಾ ಸಮವಸ್ತ್ರ ಧರಿಸಿ ಯುದ್ಧ ಭೂಮಿಗೆ ಎಂಟ್ರಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದು ಸಾವು ನೋವಿಗೆ ಕಾರಣವಾಗಿದೆ. ನಾಗರಿಕರು ದೇಶ ತೊರೆದು ಬೇರೆಡೆ ತೆರಳುತ್ತಿದ್ದಾರೆ. ಜೊತೆಗೆ ದೇಶದ ರಕ್ಷಣೆಯ ಹೊಣೆ ನಾಗರಿಕರೆ ಹೊತ್ತಿದ್ದು, ಗನ್ ಹಿಡಿದು ಸೇನೆ ಜೊತೆ ಕೈಜೋಡಿಸಿದ್ದಾರೆ.
ಇದೀಗ ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇನಾ ಸಮವಸ್ತ್ರ ತೊಟ್ಟು ದೇಶ ರಕ್ಷಣೆಗಿಳಿದಿದ್ದಾರೆ. ನಮ್ಮ ದೇಶ ರಕ್ಷಣೆಗೆ ಏಕಾಂಗಿಯಾಗಿ ಹೋರಾಡುತ್ತೇವೆ ಎಂದಿದ್ದಾರೆ. ಉಕ್ರೇನ್ ಪ್ರಧಾನಿಯ ಸಮವಸ್ತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅತ್ಯಂತ ಶಕ್ತಿಶಾಲಿ ದೇಶವೂ ದೂರದಿಂದಲೇ ನೋಡುತ್ತಿದೆ: ಉಕ್ರೇನ್ ಅಧ್ಯಕ್ಷ ಆಕ್ರೋಶ
ಕೀವ್: ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಮೊಟಕುಗೊಳಿಸಲು ಮಾಸ್ಕೋ ಮೇಲೆ ವಿಧಿಸಲಾಗಿರುವ ನಿರ್ಬಂಧಗಳು ಸಾಕಾಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಕೀವ್ ಮೇಲಿನ ರಷ್ಯಾದ ಕಾರ್ಯಾಚರಣೆಯ ನಂತರ ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಝೆಲೆನ್‌ಸ್ಕಿ, 'ಜಗತ್ತು ಇನ್ನೂ ಉಕ್ರೇನ್‌ನಲ್ಲಿನ ಘಟನೆಗಳನ್ನು ದೂರದಿಂದ ಗಮನಿಸುತ್ತಿದೆ' ಎಂದು ಹೇಳಿದ್ದಾರೆ.
'ಇಂದು(ಶುಕ್ರವಾರ) ಬೆಳಿಗ್ಗೆ, ನಾವು ನಮ್ಮ ದೇಶವನ್ನು ಏಕಾಂಗಿಯಾಗಿ ರಕ್ಷಿಸಿಕೊಳ್ಳುತ್ತಿದ್ದೇವೆ. ನಿನ್ನೆಯಂತೆಯೇ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವು(ಅಮೆರಿಕ) ದೂರದಿಂದಲೇ ನೋಡುತ್ತ ನಿಂತಿದೆ' ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
'ರಷ್ಯಾ ಮೇಲೆ ಹೇರಲಾದ ನಿರ್ಬಂಧಗಳು ಸಾಕಾಗುವುದಿಲ್ಲ. ಒಗ್ಗಟ್ಟು ಮತ್ತು ಹಲವು ಗಟ್ಟಿ ನಿರ್ಣಯಗಳ ಮೂಲಕ ರಷ್ಯಾವನ್ನು ನಮ್ಮ ದೇಶದಿಂದ ಹೊರಹಾಕಬಹುದು' ಎಂದು ಅವರು ತಿಳಿಸಿದ್ದಾರೆ.
ಯುಕೆ, ಯುಎಸ್, ಜರ್ಮನಿ ಹಾಗೂ ಕೆನಡಾ ಸೇರಿದಂತೆ ಹಲವಾರು ದೇಶಗಳ ನಾಯಕರು ಉಕ್ರೇನ್ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿದ್ದಾರೆ.
ಜಾಗತಿಕ ಆರ್ಥಿಕತೆಯಿಂದ ಮಾಸ್ಕೋವನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಹೊಸ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ.