Draupadi Murmu | ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನವಾಣಾ ಫಲಿತಾಂಶ ಪ್ರಕಟವಾಗಿದ್ದು, ಎನ್ಡಿಎ ಅಭ್ಯರ್ಥಿ, ಜಾರ್ಖಂಡ್ ನ ಮಾಜಿ ಗವರ್ನರ್ ಆಗಿದ್ದ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದಾರೆ.
ಈ ಮೂಲಕ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸುವ ಮೊದಲ ಬುಡಕಟ್ಟು ಜನಾಂಗದ ಮಹಿಳೆ ಎಂಬ ಹೆಗ್ಗಳಿಕೆಗೆ ಒಡಿಶಾ ಮೂಲದ ಮುರ್ಮು ಪಾತ್ರರಾಗಿದ್ದಾರೆ. 1958 ಜೂನ್ 20ರಂದು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಉಪರಬೇದಾ ಗ್ರಾಮದಲ್ಲಿ ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಜನನ. ಬ್ಯಾಂಕ್ ಉದ್ಯೋಗಿಯಾಗಿದ್ದ ಶ್ಯಾಮ್ ಚರಣ್ ಮುರ್ಮು ಎಂಬವರನ್ನು ಮುರ್ಮು ವಿವಾಹವಾಗಿದ್ದು, 2014ರಲ್ಲಿ ಪತಿ ಸಾವಿಗೀಡಾಗಿದ್ದು. ಇಬ್ಬರು ಪುತ್ರರು ಕೂಡಾ ಮರಣ ಹೊಂದಿದ್ದು ಮಗಳು ಇತಿಶ್ರೀ ಮುರ್ಮು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಮುರ್ಮು ಶಿಕ್ಷಕಿಯಾಗಿದ್ದರು . ರಾಯಿರಂಗ್ ಪುರದಲ್ಲಿ ಶ್ರೀ ಅರಬಂದೊ ಇಂಟೆಗ್ರಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅವರು ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಒಡಿಶಾ ಸರ್ಕಾರ ನೀರಾವರಿ ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.
ರಾಜಕೀಯ ಪಯಣ
1997ರಲ್ಲಿ ಬಿಜೆಪಿ ಸೇರಿದ ಮುರ್ಮು ರಾಯಿರಂಗಪುರ ನಗರ ಪಂಚಾಯತ್ ಕೌನ್ಸಿಲರ್ ಆಗಿ ಆಯ್ಕೆಯಾದರು. 2000ದಲ್ಲಿ ರಾಯಿರಂಗಪುರ ನಗರ ಪಂಚಾಯತ್ ಅಧ್ಯಕ್ಷರಾದ ಅವರು ಬಿಜೆಪಿ ಬುಡಕಟ್ಟು ಜನಾಂಗ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಮತ್ತು ಬಿಜೆಡಿ ಸಮ್ಮಿಶ್ರ ಸರ್ಕಾರ ರಚನೆಯಾದ ಮುರ್ಮು ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು.
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆದಿದ್ದು ಇಂದು(ಗುರುವಾರ) ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ನಡೆದಿದೆ. ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ಮುರ್ಮ ಮುನ್ನಡೆ ಸಾಧಿಸಿದ್ದರು. ಮುರ್ಮ ಅವರಿಗೆ 540 ಮತಗಳು ಲಭಿಸಿದ್ದು ಒಟ್ಟು ಮತದ ಮೌಲ್ಯ 3,78,000 ಆಗಿದೆ. ಅದೇ ವೇಳೆ ಯಶವಂತ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ.