ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತಿರುವೆ; ರಾಹುಲ್ ಗಾಂಧಿ

ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತಿರುವೆ; ರಾಹುಲ್ ಗಾಂಧಿ


ದೆಹಲಿ ಏಪ್ರಿಲ್ 22: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ರಾಹುಲ್ ಗಾಂಧಿ ಖಾಲಿ ಮಾಡಿದ್ದು, ಕೆಲ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರು ನಿಯಮಾನುಸಾರ ಸಂಸದರಿಗಾಗಿ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡುವಂತಿಲ್ಲ. ಅವರು ವಾಸವಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕಳೆದ ತಿಂಗಳು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಲಾಗಿತ್ತು. ನೋಟಿಸ್ ಬಂದಾಗಿನಿಂದ ರಾಹುಲ್ ಗಾಂಧಿಗೆ ಸೇರಿದ ವಸ್ತುಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗುತ್ತಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ

ಇಂದು ಅಂದರೆ ಏಪ್ರಿಲ್ 22ರೊಳಗೆ ಅಧಿಕೃತ ನಿವಾಸ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಇಂದು ಮನೆ ಖಾಲಿ ಮಾಡಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಅವರು ತುಘಲಕ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯ ಕೀಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಭಾರತದ ಜನರು 19 ವರ್ಷಗಳಿಂದ ಈ ಮನೆಯನ್ನು ನನಗೆ ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆದರೆ ಆ ಮನೆಯನ್ನು ನನ್ನಿಂದ ಕಸಿದುಕೊಳ್ಳಲಾಗಿದೆ. ಅದಕ್ಕೆ ಬೆಲೆ ನೀಡಬೇಕಾಗುತ್ತದೆ. ನನ್ನ ವಿರುದ್ಧ ಮಾಡಿದ ಪಿತೂರಿಗೆ ತಕ್ಕ ಪಾಠ ಕಲಿಸಲು ನಾನು ಸಿದ್ಧನಿದ್ದೇನೆ'' ಎಂದು ರಾಹುಲ್ ಗಾಂಧಿ ಹೇಳಿದರು.

2005 ರಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ, ರಾಹುಲ್ ಗಾಂಧಿಗೆ 12 ತುಘಲಕ್ ಲೇನ್ ಬಂಗಲೆಯನ್ನು ಮಂಜೂರು ಮಾಡಲಾಯಿತು. ಕಳೆದ 19 ವರ್ಷಗಳಿಂದ ರಾಹುಲ್ ಗಾಂಧಿ ಅಲ್ಲಿ ವಾಸವಾಗಿದ್ದರು. ಅವರನ್ನು ಅನರ್ಹಗೊಳಿಸಿದ ಬಳಿಕ ಬಂಗಲೆ ತೆರವು ಮಾಡಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು.

ರಾಹುಲ್ ಗಾಂಧಿ ಈಗ ಎಲ್ಲಿ ವಾಸ ಮಾಡುತ್ತಾರೆ?

ಇದೀಗ ರಾಹುಲ್ ಗಾಂಧಿ ಮನೆ ಖಾಲಿ ಮಾಡಿದ್ದು, ಮುಂದೆ ಎಲ್ಲಿ ಉಳಿಯುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾಂಗ್ರೆಸ್ ಮಾಜಿ ಅಧ್ಯಕ್ಷೆ (ಸೋನಿಯಾ ಗಾಂಧಿ) ಅವರ 10 ಜನ್‌ಪಥ್ ನಿವಾಸದಲ್ಲಿ ಕೆಲಕಾಲ ಉಳಿದು ನಂತರ ಏನು ಮಾಡಬಹುದೆಂದು ನೋಡುತ್ತೇನೆ' ಎಂದರು.

Previous Post Next Post