48 ರಿಂದ 72 ಗಂಟೆಯೊಳಗೆ ರಾಜ್ಯಕ್ಕೆ ಹೊಸ ಸರಕಾರ ನೀಡುತ್ತೇವೆಂದ ಸುರ್ಜೇವಾಲ
ಬೆಂಗಳೂರು, ಮೇ 17: 'ಕರ್ನಾಟಕ ರಾಜ್ಯಕ್ಕೆ ಸ್ವಚ್ಛ, ಪ್ರಾಮಾಣಿಕ ಮತ್ತು ಪಾರದರ್ಶಕ ಸರಕಾರ ನೀಡುವುದು ನಮ್ಮ ಕರ್ತವ್ಯವಾಗಿದ್ದು, 48 ರಿಂದ 72 ಗಂಟೆಗಳಲ್ಲಿ ರಾಜ್ಯಕ್ಕೆ ಹೊಸ ಸರಕಾರ ನೀಡುತ್ತೇವೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮೇಲೆ ನಮ್ಮ ಆತ್ಮೀಯ ಮಾಧ್ಯಮ ಮಿತ್ರರು ಬಿಜೆಪಿಯ 'ಸುಳ್ಳು ಸುದ್ದಿಯ ಕಾರ್ಖಾನೆ'ಗೆ ಬಲಿಯಾಗಿದ್ದಾರೆ ಎಂದು ಎಚ್ಚರಿಸಿದರು.
'ಬಿಜೆಪಿಯ ಹತಾಶೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲವು. ಕರ್ನಾಟಕದ ಸಹೋದರ, ಸಹೋದರಿಯರಿಂದ ನಿರ್ಣಾಯಕವಾಗಿ 40 ಪರ್ಸೆಂಟ್ ಬಿಜೆಪಿ ಸರಕಾರ ತಿರಸ್ಕರಿಸಲ್ಪಟ್ಟಿದೆ. ಉತ್ತರ ಪ್ರದೇಶ, ಅಸ್ಸಾಂ, ಗೋವಾ ಮತ್ತು ಇತರ ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ನಿರ್ಧರಿಸಲು 7 ರಿಂದ 10 ದಿನಗಳನ್ನು ತೆಗೆದುಕೊಂಡಾಗ ಅದೇ ಜನರು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದರೆ? ಎಂದು ಅವರು ಕೇಳಿದರು.
ಆಗ ಯಾರೂ ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಪಿಸುಗುಟ್ಟಲಿಲ್ಲ. ಆದರೆ, ಅದೇ ಶಕ್ತಿಗಳು ಮತ್ತು ಆಯ್ದ ಸುದ್ದಿವಾಹಿನಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನೈಜ ಪ್ರಜಾಪ್ರಭುತ್ವದ ಸಂಪ್ರದಾಯದಂತೆ ಸಂವಾದ, ಚರ್ಚೆ, ಒಮ್ಮತದ ಪ್ರಕ್ರಿಯೆಗಳನ್ನು ನಡೆಸುತ್ತಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿವೆ ಎಂದು ಸುರ್ಜೇವಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕತ್ವದ ವಿಚಾರದಲ್ಲಿ ಹೇಳಿಕೆ ನೀಡದಂತೆ ಎಲ್ಲ ಕಾಂಗ್ರೆಸ್ ನಾಯಕರಿಗೂ ಸೂಚಿಸಿದ್ದೇನೆ. ಇಲ್ಲಿಂದ ಮುಂದಕ್ಕೆ ಮಾಡಿದ ಯಾವುದೇ ಬಗೆಯ ಟೀಕೆಗಳನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ಕನ್ನಡಿಗನ ಕಲ್ಯಾಣಕ್ಕೆ ಬದ್ಧವಾಗಿದ್ದು, ಸಚಿವ ಸಂಪುಟದ ಮೊದಲ ಸಭೆಯಲ್ಲಿ 5 ಕಾಂಗ್ರೆಸ್ ಭರವಸೆಗಳನ್ನು ಜಾರಿಗೊಳಿಸಲಿದೆ. ಕರ್ನಾಟಕಕ್ಕೆ ಸ್ವಚ್ಛ, ಪ್ರಾಮಾಣಿಕ ಮತ್ತು ಪಾರದರ್ಶಕ ಸರ್ಕಾರ ನಮ್ಮ ಕರ್ತವ್ಯವಾಗಿದ್ದು, 48 ರಿಂದ 72 ಗಂಟೆಗಳಲ್ಲಿ ರಾಜ್ಯಕ್ಕೆ ಹೊಸ ಸರಕಾರ ನೀಡುತ್ತೇವೆ. ನಾವು ಬ್ರಾಂಡ್ ಕರ್ನಾಟಕವನ್ನು ಮರುನಿರ್ಮಾಣ ಮಾಡುತ್ತೇವೆ ಮತ್ತು 6.5 ಕೋಟಿ ಕನ್ನಡಿಗರ ಕನಸನ್ನು ನನಸಾಗಿಸುತ್ತೇವೆ ಎಂದು ಸುರ್ಜೇವಾಲ ಭರವಸೆ ನೀಡಿದ್ದಾರೆ.
ಪ್ರಜಾಪ್ರಭುತ್ವವನ್ನು ಉಳಿಸಲು, ಬಲಪಡಿಸಲು ಮತ್ತು ಸಾಂವಿಧಾನಿಕ ತತ್ವಗಳನ್ನು ಪುನರುಚ್ಚರಿಸಲು ಹೊಸ ಮಾರ್ಗವನ್ನು ತೋರಿಸಿದ್ದಕ್ಕಾಗಿ ನಾವು ಮತ್ತೊಮ್ಮೆ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಈ ಮಧ್ಯೆ 'ಮುಖ್ಯಮಂತ್ರಿ ಪಟ್ಟ'ಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಪೈಪೋಟಿ ಮುಂದುವರಿದಿದೆ. ಇಬ್ಬರೂ ತಮ್ಮ ಬಿಗಿಪಟ್ಟು ಸಡಿಲಿಸದಿರುವುದು ಹೈಕಮಾಂಡ್‍ಗೆ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು, 'ಹೆಚ್ಚಿನ ಶಾಸಕರು ಹಾಗೂ ಜನ ಬೆಂಬಲ ನನಗಿದೆ. ಹೀಗಾಗಿ ನನ್ನನ್ನು ಸಿಎಂ ಮಾಡಿ' ಎಂದು ಹಠಕ್ಕೆ ಬಿದ್ದಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್ 'ಕಷ್ಟ ಕಾಲದಲ್ಲಿ ಶ್ರಮಪಟ್ಟು ಪಕ್ಷ ಅಧಿಕಾರಕ್ಕೆ ತಂದಿದ್ದೇನೆ. ಹೀಗಾಗಿ ಮುಖ್ಯಮಂತ್ರಿ ಮಾಡಿ' ಎಂದು ಪಟ್ಟು ಹಿಡಿದಿದ್ದಾರೆ.