ಹುಲಿಗಳ ಬೇಟೆಯಾಡಿದ ಕಾಂಗರೂಗಳು: ಆಸಿಸ್ ಗೆ ಆರನೇ ವಿಶ್ವಕಪ್, ಅಜೇಯ ಭಾರತಕ್ಕೆ ಸೋಲು

ಹುಲಿಗಳ ಬೇಟೆಯಾಡಿದ ಕಾಂಗರೂಗಳು: ಆಸಿಸ್ ಗೆ ಆರನೇ ವಿಶ್ವಕಪ್, ಅಜೇಯ ಭಾರತಕ್ಕೆ ಸೋಲು


ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಆಸ್ಟ್ರೇಲಿಯ ತಂಡ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಕ್ಕೆ ಸವಾಲೊಡ್ಡಿ ನಿಂತು ಆರನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.


ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಮೋಘ ನಿರ್ವಹಣೆ ತೋರಿದ ಆಸೀಸ್ ಟಾಸ್ ಗೆದ್ದು ಭಾರತವನ್ನು 240 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಬೌಲರ್ ಗಳ ಮೇಲೆ ಇಟ್ಟಿದ್ದ ಭರವಸೆಯೂ ಹುಸಿಯಾಯಿತು. ಗುರಿ ಬೆನ್ನಟ್ಟಿದ್ದ ಆಸೀಸ್ ತನ್ನ ಸಾಮರ್ಥ್ಯ ಮೆರೆದು 43 ಓವರ್ ಗಳಲ್ಲಿ 4ವಿಕೆಟ್ ನಷ್ಟಕ್ಕೆ 241ರನ್ ಗಳಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. 

ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅತ್ಯಮೋಘ ಶತಕ ಸಿಡಿಸಿದರು. ವಿಶ್ವಕಪ್ ಫೈನಲ್ ನಲ್ಲಿ ಶತಕ ಸಿಡಿಸಿದ ಏಳನೇ ಬ್ಯಾಟರ್ ಎನಿಸಿಕೊಂಡರು. ಅವರು 95 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಸ್ಮರಣೀಯ ಆಟವಾಡಿದ ಹೆಡ್, ಕಪ್ ಗೆಲ್ಲಲು ಕೇವಲ ಎರಡೇ ರನ್ ಬಾಕಿ ಇದ್ದಾಗ 137 ರನ್ ಗಳಿಸಿದ್ದ ವೇಳೆ ಸಿರಾಜ್ ಎಸೆದ ಚೆಂಡನ್ನು ಗಿಲ್ ಕೈಗಿತ್ತು ನಿರ್ಗಮಿಸಿದರು. 120 ಎಸೆತಗಳಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ಹೆಡ್ 15 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಲಬುಶೇನ್ ಔಟಾಗದೆ 58 ರನ್ ಗಳಿಸಿದರು.


ಭೋರ್ಗರೆಯುತ್ತಿರುವ ಅಹ್ಮದಾಬಾದ್‌ ಕ್ರೀಡಾಂಗಣವನ್ನು ನಿಶ್ಯಬ್ದಗೊಳಿಸುವುದೇ ನಮ್ಮ ಗುರಿ ಎಂದು ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದರು. ಅದನ್ನು ಆಸೀಸ್ ತಂಡ ನಿಜವಾಗಿಸಿದೆ. ಸತತ 10 ಗೆಲುವಿನೊಂದಿಗೆ ಕಪ್ ಎತ್ತುವ ವಿಶ್ವಾಸ ಹೊಂದಿದ್ದ ರೋಹಿತ್ ಬಳಗ ಗೆಲುವಿನ ಶಿಖರದಿಂದ ಜಾರಿತು. ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಾಂತರ ಭಾರತದ ಅಭಿಮಾನಿಗಳು ಮೌನಕ್ಕೆ ಶರಣಾಗಿ ಹೋದರು. ಹಲವರ ಕಣ್ಣಗಳಿಂದ ಧಾರಾಕಾರವಾಗಿ ನೀರು ಸುರಿಯಿತು.



Previous Post Next Post