ಸಂಘಟನಾ ಕಾರ್ಯಾಚರಣೆಗೆ ಮೊದಲ ಆದ್ಯತೆ ನೀಡಬೇಕು: ಸಯ್ಯದ್ ಮುನೀರುಲ್ ಅಹ್ದಲ್
ಮೂಡಡ್ಕ: ಸಂಘಟನಾ ಕಾರ್ಯಾಚರಣೆ ಇಬಾದತ್ ಆಗಿದ್ದು ನಮ್ಮ ದೈನಂದಿನ ಕಾರ್ಯಗಳಿಗಿಂತ ಸಂಘಟನೆಯ ಕಾರ್ಯಾಚರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೇರಳ ರಾಜ್ಯ ಎಸ್ಸೆಸ್ಸೆಫ್ ಕೋಶಾಧಿಕಾರಿ ಸಯ್ಯದ್ ಮುನೀರುಲ್ ಅಹ್ದಲ್ ಹಿಮಮಿ ಅಹ್ಸನಿ ಅಲ್ ಕಾಮಿಲ್ ತಿಳಿಸಿದರು. ಅವರು ಮೂಡಡ್ಕ ಅಲ್ ಮದೀನತುಲ್ ಮುನವ್ವರ ಸಂಸ್ಥೆಯಲ್ಲಿ ನಡೆದ ರಾಜ್ಯ ಸಮಿತಿಯ ಕ್ಯೂಡಿ ವಿಭಾಗ ಹಮ್ಮಿಕೊಂಡ 'ಗ್ರೀನ್ ಜೀಟೀಮ್ ಸಿಟ್ಟಿಂಗ್' ನಲ್ಲಿ ತರಗತಿ ನಡೆಸಿ ಮಾತನಾಡುತ್ತಿದ್ದರು.
ಎಸ್ಸೆಸ್ಸೆಫ್ ಮೂಲಕ ದೀನಿ ಸೇವೆಗೆ ಅಲ್ಲಾಹನು ನಮ್ಮನ್ನು ಆಯ್ಕೆ ಮಾಡಿದ್ದು ನಮ್ಮ ಸೌಭಾಗ್ಯ. ಜೀವನ ಜಂಜಾಟದಲ್ಲಿ ನಾವು ಎಷ್ಟೇ ಬ್ಯುಸಿಯಾಗಿದ್ದರು ಮೀಟಿಂಗ್ ನಲ್ಲಿ ಭಾಗವಹಿಸಬೇಕು. ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದು ಅಲ್ಲಾಹನ ಬಳಿ ಪುಣ್ಯವಿರುವ ಕಾರ್ಯವಾಗಿದೆ ಎಂದು ಅವರು ತಿಳಿಸಿದರು. ಕ್ಯೂಡಿ ವಿಭಾಗದ ಮೂಲಕ ಸಂಘಟನೆಯ ಸಬಲೀಕರಣವಾಗಬೇಕಿದೆ. ಅದಕ್ಕೆ ಕ್ಯೂಡಿ ಕಾರ್ಯದರ್ಶಿಗಳು ಸಹಕರಿಸಬೇಕೆಂದು ಕೂಡ ಅವರು ಸೂಚಿಸಿದರು.
ರಾಜ್ಯ ಕ್ಯೂಡಿ ಕಾರ್ಯದರ್ಶಿ ಎಮ್ಮೆಸ್ಸೆಂ ಜುನೈದ್ ಹಿಮಮಿ ಸಖಾಫಿ ಸ್ವಾಗತ ಮಾಡಿದರು. ಕ್ಯಾಬಿನೆಟ್ ಕಾರ್ಯದರ್ಶಿ ಅಲಿ ತುರ್ಕಳಿಕೆ ಮುನ್ನುಡಿ ಭಾಷಣ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಸಭೆಯ ಅಧ್ಯಕ್ಷತೆ ವಹಿಸಿದರು ಮತ್ತು ಚರ್ಚೆಗೆ ನೇತೃತ್ವ ನೀಡಿದರು. ಮಂಗಳೂರಿನಲ್ಲಿ ನಡೆಯುವ ಎಸ್ ವೈ ಎಸ್ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನ ಯಶಸ್ವಿಗಳಿಸಲು ಕರೆನೀಡಲಾಯಿತು. ರಾಜ್ಯ ನಾಯಕರಾದ ರಶೀದ್ ಮಡಂತ್ಯಾರ್, ಶರೀಫ್ ಕುದುರೆಗುಂಡಿ ಉಪಸ್ಥಿತರಿದ್ದರು.