ರಾಜ್ಯ ಸಾಹಿತ್ಯ ಹಬ್ಬಕ್ಕೆ ಕ್ಷಣಗಣನೆ: ಭಟ್ಕಳದತ್ತ ಪ್ರತಿಭೆಗಳ ದಂಡು

ರಾಜ್ಯ ಸಾಹಿತ್ಯ ಹಬ್ಬಕ್ಕೆ ಕ್ಷಣಗಣನೆ: ಭಟ್ಕಳದತ್ತ ಪ್ರತಿಭೆಗಳ ದಂಡು
ಭಟ್ಕಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ನ ರಾಜ್ಯಮಟ್ಟದ ಸಾಹಿತ್ಯೋತ್ಸ ಕಾರ್ಯಕ್ರಮ ಫೆ. ೯, ೧೦, ೧೧ ರಂದು ಭಟ್ಕಳದ ತಾಲೂಕ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ, ಹೇಳಿದ್ದಾರೆ. 

ಅವರು ಗುರುವಾರ ಭಟ್ಕಳದಲ್ಲಿ ಪತ್ರಿಕಾಗೋಷ್ಟಿಯಲ್ಲಿ ರಾಜ್ಯಮಟ್ಟದ ಸಾಹಿತ್ಯೋತ್ಸವ ಹಾಗೂ ಸ್ಪರ್ಧಾ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡಿದರು. 

ಪ್ರತಿಭಾವಂತ ಮಕ್ಕಳನ್ನು ಸಮಾಜಕ್ಕೆ ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿಯನ್ನು ತುಂಬಲು ಎಸ್ಸೆಸ್ಸೆಫ್ ಯುನಿಟ್, ಸೆಕ್ಟರ್, ಡಿವಿಷನ್ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದ್ದು ಅದರಲ್ಲಿ ಪ್ರಥಮ ಸ್ಥಾನವನ್ನು ಪಡೆದ ೨೬ ಜಿಲ್ಲೆಗಳ ಪ್ರತಿಭೆಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಎಂಟು ವೇದಿಕೆಗಳಲ್ಲಿ ೧೨೦ ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ವಿವಿಧ ಕಡೆಗಳಿಂದ ೧೫೦೦ ಪ್ರತಿಭೆಗಳು ಭಾಗವಹಿಸಲಿದ್ದಾರೆ.

ಶುಕ್ರವಾರ ಮಧ್ಯಾಹ್ನ ೨ ಗಂಟೆಗೆ ಭಟ್ಕಳದ ಪ್ರಮುಖ ದರ್ಗಾಗಳಲ್ಲಿ ಝಿಯಾರತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಸಂಜೆ ೪ ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಉದ್ಘಾಟನಾ ಸಮಾರಂಭ, ಆಧ್ಯಾತ್ಮಿಕ ಸಂಗಮ ಮೊದಲ ದಿನ ನಡೆಯಲಿದ್ದು ಮೂರು ದಿನಗಳ ಕಾರ್ಯಕ್ರಮ ರವಿವಾರ ಮಧ್ಯಾಹ್ನ ೧೨ ಗಂಟೆಗೆ ಸಮಾರೋಪಗೊಳ್ಳಲಿದೆ.

ಸಯ್ಯಿದ್ ಆಟಕ್ಕೋಯ ತಂಙಳ್ ಕುಂಬೋಳ್ ರವರು ಆಧ್ಯಾತ್ಮಿಕ ಸಂಗಮಕ್ಕೆ ನೇತೃತ್ವ ನೀಡಲಿದ್ದು ಖ್ಯಾತ ಚಿಂತಕ, ಬರಹಗಾರ ಡಾ ಹೆಚ್ ಎಸ್ ಸತ್ಯನಾರಾಯಣ ಚಿಕ್ಕಮಗಳೂರು ರವರು ಸಭೆಯನ್ನು ಉದ್ಘಾಟಿಸಲಿದ್ದಾರೆ. ಕಲ್ಲಿಕೋಟೆಯ ಮರ್ಕಝ್ ವಿಶ್ವ ವಿದ್ಯಾನಿಲಯದ ವೈಸ್ ಚಾನ್ಸೆಲರ್ ಅಡ್ವೋಕೇಟ್ ಡಾ ಹುಸೈನ್ ಸಖಾಪಿ ಚುಳ್ಳಿಕ್ಕೋಡ್ ಮುಖ್ಯ ಭಾಷಣ ಮಾಡಲಿದ್ದಾರೆ.

ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್, ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದು. ಪ್ರಮುಖ ವಿದ್ವಾಂಸ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ
ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಈ ವರ್ಷದ ಸುನ್ನೀ ಸಾಹಿತ್ಯ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.

ಎಸ್.ಎಸ್.ಎಫ್  ಸುನ್ನೀ ಸಾಹಿತ್ಯ ಪ್ರಶಸ್ತಿಗೆ ಸ್ವಾಲಿಹ್ ತೋಡಾರ್ ಆಯ್ಕೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ವತಿಯಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನೀಡುವ ಸುನ್ನೀ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಬರಹಗಾರ ಸ್ವಾಲಿಹ್ ತೋಡಾರ್ ರವರನ್ನು ಆಯ್ಕೆ ಮಾಡಲಾಗಿದೆ. 
ಸುನ್ನೀ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಪುಸ್ತಕಗಳನ್ನು ಬರೆದು ಸಮರ್ಪಿಸಿದ್ದಲ್ಲದೆ ಇತ್ತೀಚೆಗೆ ಬರೆದ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ ಎಂಬ ಅತ್ಯಮೂಲ್ಯ ಬೃಹತ್ ಗ್ರಂಥವನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ಎಸ್ಸೆಸ್ಸೆಫ್ ರಾಜ್ಯ ಸಮಿತಿ ನೇಮಕ ಮಾಡಿದ ಎಸ್ ಪಿ ಹಂಝ ಸಖಾಫಿ, ಅಬ್ದುಲ್ ಹಮೀದ್ ಬಜ್ಪೆ, ಕೆಎಂ ಅಬೂಬಕ್ಕರ್ ಸಿದ್ದೀಕ್, ಜಿಎಂ ಕಾಮಿಲ್ ಸಖಾಫಿ ರವರನ್ನು ಒಳಗೊಂಡ ಆಯ್ಕೆ ಸಮಿತಿ ಸ್ವಾಲಿಹ್ ತೋಡಾರ್ ರವರನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಸಯ್ಯಿದ್ ಅಲವಿ ಅಲ್ ಬುಖಾರಿ, ಕರ್ಕಿ, ಚೆಯರ್‌ಮನ್, ಸಾಹಿತ್ಯೋತ್ಸವ ಸ್ವಾಗತ ಸಮಿತಿ, ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು, ಪ್ರಧಾನ ಕಾರ್ಯದರ್ಶಿ, ಎಸ್ಸೆಸ್ಸೆಫ್ ಕರ್ನಾಟಕ, ಆರಿಫ್ ಸಅದಿ, ಭಟ್ಕಳ, ಕನ್ವೀನರ್, ಸಾಹಿತ್ಯೋತ್ಸವ ಸ್ವಾಗತ ಸಮಿತಿ, ಕೆ.ಕೆ ಆಶ್ರಫ್, ಸಖಾಫಿ ಹರಿಹರ, ಚೆಯರ್‌ಮನ್, ಸಾಹಿತ್ಯೋತ್ಸವ ಸಮಿತಿ, ಮುಜೀಬ್ ಕೊಡಗು, ಕಾರ್ಯದರ್ಶಿ, ಎಸ್ಸೆಸ್ಸೆಫ್ ಕರ್ನಾಟಕ, ಮುನೀರ್ ಅಹ್ಮದ್, ವೈಸ್ ಚೆಯರ್‌ಮನ್, ಸಾಹಿತ್ಯೋತ್ಸವ ಸ್ವಾಗತ ಸಮಿತಿ ಉಪಸ್ಥಿತರಿದ್ದರು.
Previous Post Next Post