ಇಂದು ಸಂಜೆ 7.15ಕ್ಕೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ
ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾನುವಾರ ಸಂಜೆ 7.15ಕ್ಕೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ.
ಸಂಜೆ 7.15ರಿಂದ 8 ಗಂಟೆವರೆಗೆ ಸಮಾರಂಭ ನಡೆಯಲಿದ್ದು, ಬೆಳಿಗ್ಗೆಯಿಂದ ನೂತನ ಸಚಿವರಿಗೆ ದೂರವಾಣಿ ಮೂಲಕ ಕರೆ ನೀಡಲಾಗುತ್ತಿದೆ. 10 ವರ್ಷಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತ ಕಳೆದುಕೊಂಡಿದ್ದು, ಇದು ಪ್ರಮಾಣವಚನ ಸ್ವೀಕಾರ ಸಮಾರಂಭ ಮತ್ತು ಸಂಪುಟದ ಸಂಯೋಜನೆಯಲ್ಲೂ ಪ್ರತಿಫಲಿಸಲಿದೆ. ತೆಲುಗುದೇಶಂ ಹಾಗೂ ಜೆಡಿಯು ಒಂದಕ್ಕಿಂತ ಹೆಚ್ಚು ಸಚಿವ ಸ್ಥಾನಗಳಿಗೆ ಒತ್ತಡ ತರುತ್ತಿದ್ದು, ಇತರ ಪಕ್ಷಗಳನ್ನೂ ಸಮಾಧಾನಪಡಿಸಬೇಕಾದ ಅನಿವಾರ್ಯತೆ ಇದೆ.
ತೆಲುಗುದೇಶಂ ನಾಲ್ಕು ಹಾಗೂ ಜೆಡಿಯು ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಆದರೆ ಈ ಎಲ್ಲರೂ ಇಂದೇ ಪ್ರಮಾಣವಚನ ಸ್ವೀಕರಿಸುತ್ತಾರೆಯೇ ಎನ್ನುವುದು ಖಚಿತವಾಗಿಲ್ಲ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಬಳಿಕ ಸತತ ಮೂರು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ.