ಬಿರುಸುಗೊಂಡ ಮುಂಗಾರು; ಭಾರಿ ಮಳೆ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಬಿರುಸುಗೊಂಡ ಮುಂಗಾರು; ಭಾರಿ ಮಳೆ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ


ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಮುಂಗಾರು ಬಿರುಸುಗೊಂಡ ಪರಿಣಾಮ ಕರಾವಳಿ ಭಾಗದ ಜಿಲ್ಲೆಗಳು ಸಂಪೂರ್ಣ ನಲುಗಲಿವೆ. ಇಲ್ಲೆಲ್ಲ ಅತೀ ಭಾರಿ ಮಳೆ ಆಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ.


ಹೌದು, ಮಲೆನಾಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗುತ್ತಿದೆ. ಕೆಲವು ದಿನಗಳಿಂದ ಬಿಟ್ಟು ಬಿಡದೇ ಜೋರು ಮಳೆ ಸುರಿಯುತ್ತಿದ್ದು, ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪ್ರಭಾವವು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮೇಲೆ ಆಗಿದೆ. ಕರ್ನಾಟಕದಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ನಿರೀಕ್ಷೆಯಂತೆ ಭಾರೀ ಮಳೆ ಆಗುತ್ತಿದೆ. ಮಂಗಳೂರಿನಲ್ಲಿ ಗೋಡೆ ಕುಸಿದ ಕಾರಣ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇಲ್ಲೆಲ್ಲ ಜಡಿ ಮಳೆ ಸುರಿಯುತ್ತಿದೆ.


ರೆಡ್ ಅಲರ್ಟ್ ಯಾವಾಗ?

ಮುಂದಿನ ಮೂರು ದಿನ ಕರ್ನಾಟಕ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ಆಗಲಿದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50 ಕಿ.ಮೀಗೂ ಹೆಚ್ಚಿರುವ ಕಾರಣ, ಮೀನುಗಾರರಿಗೆ ಅಗತ್ಯ ಎಚ್ಚರಿಕೆ ನೀಡಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಡಲಾಗಿದೆ. ಇದೆಲ್ಲ ಕಾರಣದಿಂದ ಈ ಮೂರು ಜಿಲ್ಲೆಗಳಿಗೆ ಇಂದು ಗುರುವಾರ (ಜೂನ್ 27) ರಂದು ಒಂದು ದಿನ 'ರೆಡ್ ಅಲರ್ಟ್' ಘೋಷಿಸಲಾಗಿದೆ.


ನಂತರ ಎರಡು ದಿನ 11-20 ಮಿಲಿ ಮೀಟರ್ ನಷ್ಟು ಮಳೆ ಆಗುವ ಕಾರಣಕ್ಕೆ 'ಆರೆಂಜ್ ಅಲರ್ಟ್' ಕೊಡಲಾಗಿದ್ದು, ನಂತರ ಎರಡು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮುಂದಿನ ಮೂರು ದಿನ ಮಾತ್ರ ಕರಾವಳಿ ಭಾರೀ ಮಳೆಗೆ ಅಕ್ಷರಶಃ ನಲುಗಲಿದೆ ಎಂದು ಹೇಳಲಾಗುತ್ತಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಇನ್ನು ಮುಂದಿನ ಎರಡು ದಿನ ರಾಜ್ಯದಲ್ಲಿ ಮುಂಗಾರು ಅಬ್ಬರಿಸುವ ಪ್ರಯುಕ್ತ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿಗೆ ಮಾತ್ರ 'ಆರೆಂಜ್ ಅಲರ್ಟ್' ನೀಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಮೈಸೂರು ಜಿಲ್ಲೆಗಳಿಗೆ ಮಾತ್ರ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ (ಮಂಗಳವಾರ) ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ 60 ಮಿಲಿ ಮೀಟರ್ ಮಳೆ ಆಗಿದೆ. ಮಲೆನಾಡಿನಲ್ಲೂ ಭಾರೀ ಮಳೆ ಆಗಿದೆ. ಈ ಪ್ರಮಾಣ ಮುಂದಿನ ಮೂರು ದಿನ ಮತ್ತಷ್ಟು ಹೆಚ್ಚಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.


Previous Post Next Post