ರಾಜ್ಯಪಾಲರ ಪ್ಯಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್: ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್
ಬೆಂಗಳೂರು,ಸೆ.24- ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಿಲುವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಸುದೀರ್ಘ ವಾದ, ಪ್ರತಿವಾದದ ಬಳಿಕ ಪ್ರಕರಣದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾ. ನಾಗಪ್ರಸನ್ನ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಮತ್ತು ಭಾರತೀಯ ನ್ಯಾಯಸಂಹಿತೆ 218 ರಡಿ ರಾಜ್ಯಪಾಲರು ನೀಡಿದ್ದ ಅಭಿಯೋಜನೆ ಮತ್ತು ತನಿಖೆಯ ಪೂರ್ವಾನುಮತಿಯನ್ನು ಎತ್ತಿ ಹಿಡಿದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಅಡಿ ಪೊಲೀಸ್ ಅಧಿಕಾರಿಯೇ ಪೂರ್ವಾನುಮತಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಡ್ಡಾಯ ನಿಯಮಗಳಿಲ್ಲ. ಖಾಸಗಿ ದೂರಿನ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರ ಬಳಸಿ ನಡೆಸಿರುವ ಪ್ರಕ್ರಿಯೆಗಳಲ್ಲಿ ದೋಷಗಳು ಕಂಡುಬಂದಿಲ್ಲ ಎಂದು ಪೀಠ ಹೇಳಿದೆ.
ಸಂವಿಧಾನದ 163 ನೇ ವಿಧಿಯಡಿ ರಾಜ್ಯಪಾಲರು ಸಂಪುಟದ ಸಲಹೆ ಆಧಾರಿತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಕೆಲ ಸಂದರ್ಭಗಳಲ್ಲಿ ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರವನ್ನು ಬಳಸಿಯೂ ನಿರ್ಧಾರ ತೆಗೆದುಕೊಳ್ಳಬಹುದು.
ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬ ಫಲಾನುಭವಿಯಾಗಿರುವುದರಿಂದ ರಾಜ್ಯಪಾಲರು ಪೂರ್ವಾನುಮತಿ ನೀಡಲು ತೆಗೆದುಕೊಂಡಿರುವ ಕ್ರಮ ಸಮರ್ಥನೀಯವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಿಲ್ಲ ಎಂಬ ವಾದವನ್ನು ತಳ್ಳಿಹಾಕಿದೆ. ಸಿದ್ದರಾಮಯ್ಯ ಅವರ ಪರ ವಕೀಲರು ತಮ ವಾದ ಮಂಡನೆಯ ಸಂದರ್ಭದಲ್ಲಿ ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಹೈಕೋರ್ಟ್ ಉತ್ತರ ನೀಡಿದೆ.ಯಾವ ರೀತಿಯ ವಿಚಾರಣೆ ಎಂಬುದನ್ನು ಕೆಳಹಂತದ ನ್ಯಾಯಾಲಯ ನಿರ್ಧರಿಸಬಹುದಾಗಿದೆ. ಈವರೆಗೂ ರಾಜ್ಯಪಾಲರ ಅಭಿಯೋಜನೆ ಆಧರಿಸಿದ ಪ್ರಕ್ರಿಯೆಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿದೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಿದ ವೇಳೆ ಸಿದ್ದರಾಮಯ್ಯ ಅವರ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಎರಡು ವಾರಗಳ ತಡೆ ನೀಡುವಂತೆ ಮನವಿ ಮಾಡಿದರು. ನಾನೇ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಇಂದು ಮಧ್ಯಾಹ್ನದ ವೇಳೆಗೆ ತೀರ್ಪಿನ ಪ್ರತಿ ಕೈ ಸೇರಲಿದೆ. ಮುಂದಿನ ಪ್ರಕ್ರಿಯೆಗಳನ್ನು ಅರ್ಜಿದಾರರು ಪಾಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.
ರಾಜ್ಯಪಾಲರ ಪೂರ್ವಾನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ರಾಜಕೀಯವಾಗಿ ಬಿರುಗಾಳಿಯೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ವಾದಗಳು ಕೇಳಿಬಂದ ವೇಳೆ ಹೈಕೋರ್ಟ್‌ನಿಂದ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ಸಿಗಬಹುದು ಎಂಬ ಅಂದಾಜುಗಳಿದ್ದವು. ಆದರೆ ಎಲ್ಲವೂ ಹುಸಿಯಾಗಿವೆ.
ಇಂದು ಬೆಳಿಗ್ಗೆಯಿಂದಲೂ ತೀರ್ಪಿಗಾಗಿ ಮುಖ್ಯಮಂತ್ರಿ ಮತ್ತು ಅವರ ತಂಡ ತೀವ್ರ ಕುತೂಹಲದಿಂದ ನಿರೀಕ್ಷಿಸಿತ್ತು. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಕೆಳಹಂತದ ನ್ಯಾಯಾಲಯಕ್ಕೆ ತನ್ನ ವಿಚಾರಣೆಯನ್ನು ಮುಂದುವರೆಸಲು ಅವಕಾಶ ಸಿಕ್ಕಿದ್ದು, ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಲು ಅವಕಾಶ ಸಿಕ್ಕಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈಗಳೂ ಹೇಳ್ತಿದ್ದೀನಿ, ನಾನು ಯಾವುದೇ ತಪ್ಪು ಮಾಡಿಲ್ಲ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಣೆ
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ನಾನು ಈಗಲೂ ಹೇಳುತ್ತಿದ್ದೇನೆ ಈ ಒಂದು ಹಗರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಆದೇಶ ಕೊಟ್ಟ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೀನಿ ಅಂತ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ಮೂಲಕ ಸ್ಪಷ್ಟನೆ ನೀಡಿದರು.
ಇಂದು ಹೈ ಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಶಾಸಕರ ಖರೀದಿಗೆ ಬಿಜೆಪಿಯವರು ಪ್ರಯತ್ನಿಸಿದ್ದರು ನಮ್ಮ ಶಾಸಕರು ದುಡ್ಡಿನ ಹಿಂದೆ ಬಿದ್ದಿಲ್ಲ ಹೇಗಾದರೂ ಮಾಡಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ.
ನಾವು 136 ಸ್ಥಾನ ಗೆದ್ದರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದಾರೆ.ದುಡ್ಡು ಕೊಟ್ಟು ಶಾಸಕರನ್ನು ಸೆಳೆಯುಕ್ಕೆ ಪ್ರಯತ್ನ ಮಾಡಿದ್ದರು ಆದರೆ ನಮ್ಮ ಶಾಸಕರು ಬಿಜೆಪಿಯವರ ಆಮಿಷಕ್ಕೆ ಒಳಗಾಗಲಿಲ್ಲ .ಅಲ್ಲದೆ ನಮ್ಮ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಬೇಕು, ಕಪ್ಪು ಮಸಿ ಬಳಿಯಬೇಕು ಎಂದು ಯತ್ನಿಸಿದ್ದಾರೆ.
ನಮ್ಮ ಸರ್ಕಾರಕ್ಕೆ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಪರೇಷನ್ ಮಾಡಕ್ಕೆ ಆಗಲಿಲ್ಲ. ಅನ್ನಭಾಗ್ಯ ಗ್ರಹಲಕ್ಷ್ಮಿ ಯುವ ನಿಧಿ ಎಲ್ಲವನ್ನು ವಿರೋಧ ಮಾಡಿದರು.ಅವರು ಸಾಮಾಜಿಕ ನ್ಯಾಯ ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪುಮಸಿ ಬಳಿಯುವುದು ಅವರ ದುರಾಲೋಚನೆ ಎಂದು ವಾಗ್ದಾಳಿ ನಡೆಸಿದರು.
ನಾಳೆ ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ
ಮೂಡಾ ಪ್ರಕರಣದ ಹೈಕೋರ್ಟ್ ತೀರ್ಪು ಪ್ರಕಟ ಬೆನ್ನಲೆ ನಾಳೆ ಕಾಂಗ್ರೇಸ್ ನ ಕೇಂದ್ರ ನಾಯಕರು ರಾಜ್ಯಕ್ಕೆ ಎಂಟ್ರಿ. ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೇಸ್ ಉಸ್ತವಾರಿ ನಾಯಕ ರಣದೀಪ ಸುರ್ಜೆವಾಲ್ ರಾಜ್ಯಕ್ಕೆ ಆಗಮನ. ತುರ್ತು ಶಾಸಕಾಂಗ ಪಕ್ಷದ ಸಭೆ ಕರೆದು ಮಹತ್ವದ ಸಭೆ ಕೈಗೊಳ್ಳಲಿರುವ ಸಿಎಂ ಸಿದ್ದು. ನಾಳೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಲಿರುವ ಸಭೆ. ಸಿಎಲ್ಪಿ ಮೀಟಿಂಗ್ ಕರೆದು ಕೈ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿದೆ.